ಬೆನ್ನುನೋವಿಗೆ ಯೋಗಚಿಕಿತ್ಸೆ

ಉತ್ತರಿಸುವವರು: ಬಿ.ರಾಘವೇಂದ್ರ ಶೆಣೈ

ಕೈಗಳಲ್ಲಿ ಜೋಮು, ಬೆನ್ನಿನ ಭಾಗದಲ್ಲಿನ ಬಿಗಿತ. ಯಾವ ಆಸನ ಮಾಡಲಿ?

| ರಾಮಚಂದ್ರ ಧರ್ಮಸ್ಥಳ

ಬೆನ್ನುನೋವು, ಕುತ್ತಿಗೆನೋವು, ಬೆನ್ನಿನ ಮಧ್ಯಭಾಗ ಮತ್ತು ಕೆಳ ಭಾಗದಲ್ಲಿ ಬಿಗಿತ ಇವೆಲ್ಲವಕ್ಕೂ ರಾಮಬಾಣದಂತಿರುವ ಕೆಲವು ಆಸನಗಳನ್ನು ತಿಳಿಯೋಣ. ಇದು ಕೂಡ ನಿಮ್ಮ ಮನೆಯ ಕಿಟಕಿಯ ಬಳಿಯೇ ಮಾಡುವ ಆಸನವಾದ್ದರಿಂದ ಸರಳ ಮತ್ತು ಸುಲಭ.

ಕಿಟಕಿಯ ದಂಡೆಯ ಸಹಾಯದಿಂದ ವಿಶೇಷ ಭಂಗಿ: ಕಿಟಕಿಗೆ ಬೆನ್ನು ಮಾಡಿ ನೇರವಾಗಿ ನಿಂತುಕೊಳ್ಳಿ. ಎರಡೂ ಹಸ್ತಗಳನ್ನು ಕಿಟಕಿಯ ದಂಡೆಯ ಮೇಲಿಡಿ. ಕಿಟಕಿಯ ಗೋಡೆಗೆ ಬೆನ್ನು ತಾಗಿರಲಿ. ಪಾದಗಳೆರಡೂ ಗೋಡೆಯಿಂದ ಮುಂದಕ್ಕಿರಲಿ. ಬೆನ್ನಿನ ಭಾಗವನ್ನು ಗೋಡೆಗೆ ತಾಗಿಸುತ್ತಲೇ ಕಾಲುಗಳನ್ನು ಮಡಿಸಿ. ಮೊಣಕೈಗಳನ್ನು ಬಾಗಿಸುತ್ತ ಕಿಟಕಿಗೆ ತಾಗಿಸಿ. ಕುರ್ಚಿಯ ಮೇಲೆ ಕುಳಿತ ಭಂಗಿಯಲ್ಲಿರಿ. ಹತ್ತರಿಂದ ಇಪ್ಪತ್ತು ಸೆಕೆಂಡ್ ಈ ಸ್ಥಿತಿಯಲ್ಲಿರಿ. ನಿಧಾನವಾಗಿ ಕಾಲುಗಳನ್ನು ನೇರ ಮಾಡುತ್ತ ನೇರವಾಗಿ ನಿಂತುಕೊಳ್ಳಿ ಮತ್ತು ಮೊದಲಿನ ಸ್ಥಿತಿಗೆ ಬನ್ನಿ. ಹೀಗೆ ಎರಡು ಬಾರಿ ಮಾಡಬೇಕು. ಆಗ ಭುಜಗಳಲ್ಲಿ ಒಳ್ಳೆಯ ಚಲನೆ ಉಂಟಾಗಿ ಕೈಗಳಲ್ಲಿ ಜೋಮು ಹಿಡಿಯುವುದು ಕಡಿಮೆಯಾಗುತ್ತದೆ.

ಕಿಟಕಿ ಹಿಡಿದು ಉತ್ಕಟಾಸನ: ಕಿಟಕಿಯ ಕಡೆಗೆ ಮುಖ ಮಾಡಿ ನೇರವಾಗಿ ನಿಲ್ಲಿ. ಭುಜಗಳ ಎತ್ತರದಲ್ಲಿರುವ ಕಂಬಿಗಳನ್ನು ಹಿಡಿದುಕೊಳ್ಳಿ. ಕೈಗಳ ನಡುವೆ ಎದೆಯಷ್ಟು ಅಗಲದ ಅಂತರವಿರಲಿ. ಪಾದಗಳೆರಡೂ ಗೋಡೆಗೆ ಒತ್ತಿರಲಿ. ಹೆಬ್ಬೆರಳುಗಳು ಎತ್ತಿರಲಿ. ಉಗುರುಗಳಿಗೆ ನೋವಾಗದಂತಿರಲಿ. ಮೊಣಕಾಲುಗಳನ್ನು ಗೋಡೆಗೆ ತಾಗಿಸಿ ಕುರ್ಚಿಯಲ್ಲಿ ಕುಳಿತುಕೊಂಡ ಹಾಗೆ ಪೃಷ್ಠವನ್ನು ಕೆಳಕ್ಕೆ ತಳ್ಳಿ. ಹತ್ತರಿಂದ ಇಪ್ಪತ್ತು ಸೆಕೆಂಡ್​ಗಳಷ್ಟು ಕಾಲ ಈ ಸ್ಥಿತಿಯಲ್ಲಿರಿ. ನಂತರ ನಿಧಾನವಾಗಿ ಕಾಲುಗಳನ್ನು ನೇರ ಮಾಡುತ್ತ ಪುನಃ ಮೊದಲಿನ ಸ್ಥಿತಿಗೆ ಬನ್ನಿ. ಹೀಗೆ ಎರಡು ಬಾರಿ ಅಭ್ಯಾಸ ಮಾಡಿ. ಇದರ ಅಭ್ಯಾಸದಿಂದ ಸೊಂಟದಿಂದ ಕೈಗಳವರೆಗೆ ಹಿಗ್ಗುವಿಕೆ ಉಂಟಾಗುತ್ತದೆ. ಬೆನ್ನಿನ ಭಾಗದಲ್ಲಿನ ಬಿಗಿತ ಕಡಿಮೆಯಾಗಿ ಸಡಿಲತೆಯ ಅನುಭವವಾಗುತ್ತದೆ. ಇದರೊಂದಿಗೆ ಮರೀಚಾಸನ (ನಿಂತು ಮಾಡುವುದು), ಕಾಲುಗಳನ್ನು ಮಡಿಸಿ ಜಠರಪರಿವರ್ತನಾಸನಗಳ ಅಭ್ಯಾಸ ಮಾಡಿ. ಇದರ ಬಗ್ಗೆ ಯೋಗಕ್ಷೇಮ ಅಂಕಣದಲ್ಲಿ ವಿವರಿಸಲಾಗಿದೆ.

ಕಡೆಯಲ್ಲಿ ವಿಶ್ರಾಂತಿ ಸ್ಥಿತಿ ಅತಿ ಅವಶ್ಯ. ಯಾವುದೇ ಆಸನಗಳ ಅಭ್ಯಾಸ ಆದ ನಂತರ ಈ ಹಂತವನ್ನು ಅಭ್ಯಾಸ ಮಾಡಲೇಬೇಕು. ಇದರಿಂದ ದೇಹ ಮತ್ತು ಮನಸ್ಸುಗಳು ವಿಶ್ರಾಂತಿ ಪಡೆಯುತ್ತವೆ. ಮುಂದಿನ ಎಲ್ಲ ಚಟುವಟಿಕೆಗಳಿಗೆ ಲವಲವಿಕೆ ಹೊಮ್ಮುತ್ತದೆ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

ಇಮೇಲ್: vvyogakshe[email protected]