
ಹುಣಸೂರು: ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ನಗರದ ನಿವಾಸಿಗಳಿಗೆ 94ಸಿ ಅಡಿಯಲ್ಲಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಹೇಳಿದರು.
ನಗರದಿಂದ 4 ಕಿ.ಮೀ. ದೂರವಿರುವ ಬಾಚಳ್ಳಿ ರಸ್ತೆಯ ಬಳಿಯಿರುವ ಅಂಬೇಡ್ಕರ್ ನಗರದಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ನಿರ್ಗತಿಕ ಅಲೆಮಾರಿಗಳ ಕುಂದುಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹುಟ್ಟು-ಸಾವುಗಳಿಗೆ ಸರಿಯಾದ ದಾಖಲೆಗಳೇ ಇಲ್ಲದೆ ಮರದ ಕೆಳಗೆ, ಪಾಳು ಮಂಟಪಗಳಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರುವ ಕೆಲಸ ಆಗಬೇಕಿದೆ. ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 33 ದೊಂಬರ ನಿರ್ಗತಿಕ ಕುಟುಂಬಗಳಿಗೆ, 34 ಆದಿವಾಸಿ ಕುಟುಂಬಗಳಿಗೆ ನೆಲೆಗಳನ್ನು ಕಲ್ಪಿಸಿ 94ಸಿ ಯೋಜನೆಯಡಿಯಲ್ಲಿ ಹಕ್ಕು ಪತ್ರ ನೀಡಲಾಗಿದೆ. ಆದರೆ, ಇದೀಗ ಸರ್ಕಾರ 94ಸಿ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಕಾಶವನ್ನು ರದ್ದುಗೊಳಿಸಿದೆ. ಸರ್ಕಾರ ಮತ್ತೆ 94ಸಿಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಅಲೆಮಾರಿಗಳ ಬದುಕಿಗೆ ಆಸರೆಯಾಗಿ ನಿಂತಿರುವ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ ಮಾತನಾಡಿ, ಅಂಬೇಡ್ಕರ್ ನಗರದ ಬಡ ಕುಟುಂಬಗಳ ಮೂಲಸೌಲಭ್ಯಗಳಿಗಾಗಿ ಮೊದಲನೇ ಹಂತವಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಶಾಸಕರ ನಿಧಿಯಿಂದ ಒಟ್ಟು 60 ಲಕ್ಷ ರೂ. ಗಳ ವೆಚ್ಚದಡಿ ರಸ್ತೆ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಿಕೊಡಲು ಕ್ರಮ ವಹಿಸಲಾಗಿದೆ. ಗ್ರಾಮಕ್ಕೆ ಅಂಬೇಡ್ಕರ್ ಭವನ, ಅಂಗನವಾಡಿ ಕಟ್ಟಡ, ಬೀದಿ ದೀಪ, ಒಂದು ಪ್ರಾಥಮಿಕ ಶಾಲೆ ಮುಂತಾದ ಮೂಲಸೌಲಭ್ಯಗಳನ್ನು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಂತ ಹಂತವಾಗಿ ಕಲ್ಪಿಸಿಕೊಡಲಾಗುವುದು. ಎಂದರು.
ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್ ನಗರದಲ್ಲಿ ವಾಸ ಮಾಡುತ್ತಿರುವ 23 ಆದಿವಾಸಿ ಕುಟುಂಬಗಳಿಗೆ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ಮಂಜೂರು ಮಾಡಬೇಕು. 33 ಜನ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ವಾಸಿಸಲು ಮನೆಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ದಿಲೀಪ್, ಪ್ರಸಾದ್, ಹುಣಸೂರು ಪಟ್ಟಣ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ನಾಗಯ್ಯ, ಪಂಚಾಯಿತಿ ಪಿಡಿಒ ರಾಜ್‌ಕುಮಾರ್, ಅಧ್ಯಕ್ಷೆ ರಾಣಿ ಶಿವರಾಮು, ಕಾರ್ಯದರ್ಶಿ ಮಹೇಶ, ಬಿಲ್ ಕಲೆಕ್ಟರ್ ಲೋಕೇಶ, ಸದಸ್ಯರಾದ ಕಮಲಮ್ಮ ಶಿವಲಿಂಗ, ನಂದೀಶ, ಮುಖಂಡರಾದ ದೇವೇಂದ್ರ ಕುಳುವಾಡಿ, ಗಜೇಂದ್ರ ಕಿರಿಜಾಜಿ, ರಾಜು ಚಿಕ್ಕಹುಣಸೂರು, ಶೇಖರ, ಹರೀಶ, ವಸಂತ, ವೇಣುಗೋಪಾಲ, ಮುರುಗೇಶ, ಶೋಭಾ, ಗಾಯತ್ರಿ ಇತರರು ಭಾಗವಹಿಸಿದ್ದರು.