ನೆಬ್ಬೂರು ಭಾಗವತರು ಎಂಬ ಖ್ಯಾತಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಹೃದಯಾಘಾತದಿಂದ ನಿಧನ

ಶಿರಸಿ: ಯಕ್ಷಗಾನ ಕ್ಷೇತ್ರದ ಖ್ಯಾತ ಮತ್ತು ಹಿರಿಯ ಭಾಗವತ, ತಾಲೂಕಿನ ಹಣಗಾರ ನಿವಾಸಿ ನೆಬ್ಬೂರು ನಾರಾಯಣ ಹೆಗಡೆ (83) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

1956-57 ರ ಸಮಯದಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡ ಅವರು ಕೆರೆಮನೆ ಮೇಳವನ್ನು ಸೇರಿದರು. ಅಲ್ಲಿಂದ ಪ್ರಾರಂಭವಾದ ಅವರ ಯಕ್ಷಗಾನ ಪಯಣ 2010ರವರೆಗೂ ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮುಂದುವರಿದಿತ್ತು.

ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ಅವರು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಭಾಗವತರು ಕೆರೆಮನೆ ಮೇಳದಲ್ಲಿ ಇರುವಾಗ ಅವರೊಂದಿಗೆ ಸಂಗೀತಗಾರರಾಗಿ ಇದ್ದರು‌. ಅವರನ್ನು ತಮ್ಮ ಗುರುವಿಗೆ ಸಮ ಎಂದು ಭಾಗವತರೇ ಹೇಳುತ್ತಿದ್ದರು.
ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳದಮಯಂತಿ, ಹರಿಶ್ಚಂದ್ರ, ರಾಮನಿರ್ಯಾಣದಂತಹ ಪ್ರಸಂಗಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ನೆಬ್ಬೂರು ಅವರಿಗೆ ಸಲ್ಲುತ್ತದೆ. ಕಲೆ ಎಂಬುದು ಆರಾಧನೆಯೇ ಹೊರತು ಗಳಿಗೆಯ ಭಾಗವಲ್ಲ ಎಂದು ತಾವು ಇರುವಷ್ಟು ದಿನವೂ ಅನುಸರಿಸಿಕೊಂಡು ಬಂದವರು ಇವರು.

ಭಾಗವತರ ಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ- ಪುರಸ್ಕಾರಗಳು ಅನೇಕ. ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದ ಅವರು ಅಭಿಮಾನಿಗಳ ಆಗ್ರಹಕ್ಕೆ‌ ಮಣಿದು ಆಟ-ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದಾಗಿ ಉತ್ತರ ಕನ್ನಡ ಪರಂಪರೆಯ ಕೊಂಡಿ ಕಳಚಿದಂತಾಗಿದೆ.

5 Replies to “ನೆಬ್ಬೂರು ಭಾಗವತರು ಎಂಬ ಖ್ಯಾತಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ ಹೃದಯಾಘಾತದಿಂದ ನಿಧನ”

  1. ಅವರ ಆತ್ಮ ಕ್ಕೆ ಭಗವಂತ ಚಿರಶಾಂತಿ ನೀಡಲಿ.

  2. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ

  3. ಕೀರ್ತಿಶೇಷರ ಆತ್ಮಕ್ಕೆ ಚಿರಶಾಂತಿ ದೊರೆಯಲಿ

Comments are closed.