ಮುನವಳ್ಳಿ ಬಳಿ 14.19 ಲಕ್ಷ ರೂ.ನಗದು ಜಪ್ತಿ

ಬೆಳಗಾವಿ: ಸವದತ್ತಿ ತಾಲೂಕು ಮುನವಳ್ಳಿ ಪಟ್ಟಣದ ಸಮೀಪ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಕಾರಿನ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಚುನಾವಣೆ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ 14.19 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸೂಕ್ತ ದಾಖಲೆ ಇಲ್ಲದೆ 50 ಸಾವಿರ ರೂ. ಮೇಲ್ಪಟ್ಟ ನಗದು ಸಾಗಿಸುವುದಕ್ಕೆ ಚುನಾವಣೆ ಆಯೋಗ ನಿರ್ಬಂಧ ವಿಧಿಸಿದೆ. ಆದರೂ ಸೂಕ್ತ ದಾಖಲೆ ಇಲ್ಲದೆ ಅಕ್ರಮವಾಗಿ 14,19,600 ರೂ. ಹಣ ಕಾರಿನಲ್ಲಿ ಸಾಗಿಸುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿ ಹಣ ವಶಪಡಿಸಿಕೊಂಡು ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ.

ಕಾರಿನಲ್ಲಿ ನಗದು ಹಣ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಮತ್ತು ಈ ಹಣ ಯಾರಿಗೆ ಸಂಬಂಧಿಸಿದ್ದು ಎಂಬುದು ಗೊತ್ತಾಗಿಲ್ಲ. ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ತಿಳಿಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಸಂದರ್ಭದಲ್ಲಿ ಚೆಕ್‌ಪೋಸ್ಟ್ ಸೇರಿದಂತೆ ಇನ್ನಿತರ ಕಡೆ ಪರಿಶೀಲನೆ ವೇಳೆ 10 ಲಕ್ಷ ರೂ.ಕ್ಕಿಂತ ಮೇಲ್ಪಟ್ಟು ನಗದು ಪತ್ತೆಯಾದರೆ ಐಟಿ ಇಲಾಖೆಗೆ ಹಸ್ತಾಂತರಿಸಲಾಗುವುದು. 10 ಲಕ್ಷ ರೂ.ಗಿಂತ ಕಡಿಮೆ ನಗದು ಸಿಕ್ಕರೆ ಚುನಾವಣೆ ಆಯೋಗ ತನ್ನ ವ್ಯಾಪ್ತಿಯಿಟ್ಟುಕೊಂಡು ಪರಿಶೀಲನೆ ನಡೆಸುತ್ತದೆ ಎಂದು ಚುನಾವಣೆ ನೀತಿ ಸಂಹಿತೆಯ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಜಗದೀಶ ರೂಗಿ ತಿಳಿಸಿದ್ದಾರೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14 ಲಕ್ಷ ರೂ.ನಗದನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ. ಶ್ರೀಕಾಂತ ಮುನವಳ್ಳಿ ಸೇರಿದಂತೆ ಮೂವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸದ್ಯ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ದಾಖಲೆಗಳ ಪರಿಶೀಲನೆ ಮತ್ತು ವಶದಲ್ಲಿರುವವರ ವಿಚಾರಣೆ ಮುಂದುವರಿದಿದೆ.
| ಸುಧೀರಕುಮಾರ ರೆಡ್ಡಿ, ಎಸ್.ಪಿ.