ವಿರಾಟ್​ ಕೊಹ್ಲಿ ಶತಕದ ನೆರವಿನೊಂದಿಗೆ ಗೆದ್ದ ಟೀಂ ಇಂಡಿಯಾ

ಡಿಲೇಡ್​: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರ ಮನಮೋಹಕ ಶತಕದ ನೆರವಿನೊಂದಿಗೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ.

ತಮ್ಮ ಕ್ರಿಕೆಟ್​ ಜೀವಮಾನದ 39ನೇ ಶತಕ ಸಿಡಿಸಿದ ವಿರಾಟ್​ ಕೊಹ್ಲಿ ಈ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಅಲ್ಲದೆ, ನಾಯಕನಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರು.
ಮೊದಲು ಬ್ಯಾಟಿಂಗ್​ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ 9 ವಿಕೆಟ್​ಗಳ ನಷ್ಟಕ್ಕೆ 298 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಮಾರ್ಶ್​ 131ರನ್​ ಗಳಿಸಿ ಮಿಂಚಿದರು.

ಆಸ್ಟ್ರೇಲಿಯಾ ನೀಡಿದ 298ರನ್​ಗಳ ಸವಾಲಿನ ಮೊತ್ತ ಬೆನ್ನು ಹತ್ತಿದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್​ ಶರ್ಮಾ ಉತ್ತಮ ಜತೆಯಾಟ ನೀಡಿದರು. ಆದರೆ, 32ರನ್​ ಗಳಿಸಿದ್ದಾಗ ಧವನ್​ ವಿಕೆಟ್​ ಒಪ್ಪಿಸಿ ಅಂಗಳದಿಂದ ಹೊರ ನಡೆದರು. ಆಗ ಬಂದ ನಾಯಕ ವಿರಾಟ್​ ಕೊಹ್ಲಿ ಸಮಯೋಚಿತ ಆಟವಾಡುವ ಮೂಲಕ ಭಾರತವನ್ನು ಸುಸ್ಥಿತಿಗೆ ಕೊಂಡೊಯ್ದರು. ಈ ಇನ್ನಿಂಗ್ಸ್​ನಲ್ಲೇ ಅವರು ತಮ್ಮ 39ನೇ ಶತಕವನ್ನೂ ಸಿಡಿಸಿದರು. ಆದರೆ, 104ರನ್​ ಗಳಿಸಿದ್ದಾಗ ಅವರು ಔಟಾದರು. ಗೆಲುವಿನ ಹತ್ತಿದಲ್ಲಿದ್ದ ಭಾರತಕ್ಕೆ ವಿರಾಟ್​ ಕೊಹ್ಲಿ ವಿಕೆಟ್​ ಪತನವಾಗಿದ್ದ ಸ್ವಲ್ಪ ಆತಂಕ ಉಂಟುಮಾಡಿತ್ತು. ರಾಯುಡು ವಿಕೆಟ್​ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಆಗ ಸ್ಕ್ರೀಸ್​ಗೆ ಇಳಿದ ಟೀಂ ಇಂಡಿಯಾ ಮಾಜಿ ನಾಯಕ ಧೋನಿ (55), ತಮ್ಮ ಎಂದಿನ ನಿಧಾನಗತಿಯ ಆಟದ ಮೂಲಕ ತಂಡವನ್ನು ದಡ ಸೇರಿಸಿದರು.

ಅಂತಿಮವಾಗಿ ಭಾರತ 4 ವಿಕೆಟ್​ಗಳ ನಷ್ಟದೊಂದಿಗೆ 49.2 ಓವರ್​ಗಳಲ್ಲಿ ಗುರಿ ತಲಪಿತು.
ಇನ್ನು ಬೌಲಿಂಗ್​ನಲ್ಲಿ ಭಾರತದ ಪರ ಭುವನೇಶ್ವರ್​ ಕುಮಾರ್​ 4, ಮೊಹಮದ್​ ಶಮಿ 3 ವಿಕೆಟ್​ ಕಿತ್ತು ಮಿಂಚಿದರು.

ಇದರೊಂದಿಗೆ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರು ಏಕದಿನ ಸರಣಿ 1-1ರಲ್ಲಿ ಸಮಬಲ ಕಂಡಿದೆ.