ಎನ್​ಡಿಎ ಅತಿದೊಡ್ಡ ಮೈತ್ರಿಕೂಟ

ನವದೆಹಲಿ: ಏಪ್ರಿಲ್-ಮೇನಲ್ಲಿ ನಡೆಯಲಿ ರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎ ಬಹುಮತ ಗಳಿಸುವುದು ಕಷ್ಟಸಾಧ್ಯ ಎಂದು ಎರಡು ಸಮೀಕ್ಷೆಗಳು ಹೇಳಿವೆ.

ಇಂಡಿಯಾ ಟುಡೆ ಹಾಗೂ ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಅತಂತ್ರ ಲೋಕಸಭೆ ಸೃಷ್ಟಿಯಾಗಲಿದೆ. ಮಹಾಮೈತ್ರಿಕೂಟಕ್ಕೆ ಬಹುಮತ ಸಿಗುವ ಸಾಧ್ಯತೆಯಿದ್ದು, ಟಿಆರ್​ಎಸ್, ವೈಎಸ್​ಆರ್ ಕಾಂಗ್ರೆಸ್ ಹಾಗೂ ಬಿಜೆಡಿ ಪಕ್ಷಗಳು ನಿರ್ಣಾಯಕವಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ತಲಾ 14 ಸೀಟು

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ತಲಾ 14 ಸೀಟು ಗೆಲ್ಲಲಿವೆ. ಮೈತ್ರಿಗೆ ಶೇ.47.9, ಬಿಜೆಪಿಗೆ ಶೇ.44 ಹಾಗೂ ಇತರರಿಗೆ ಶೇ.8.1 ಮತ ಬೀಳುವ ಸಾಧ್ಯತೆಯಿದೆ.

ಪ್ರಿಯಾಂಕಾ ಸ್ಪರ್ಧೆ ಎಲ್ಲಿ?

ರಾಜಕೀಯ ಪ್ರವೇಶ ಮಾಡಿರುವ ಪ್ರಿಯಾಂಕಾ ಗಾಂಧಿ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಸೋನಿಯಾ ಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಯ್ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧೆ ಬಹುತೇಕ ಅಂತಿಮ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಹೊಸ ಚರ್ಚೆಗೆ ನಾಂದಿಯಾಗಿದೆ. ‘ಮೋದಿ ಮುಕ್ತ ವಾರಾಣಸಿ ಹಾಗೂ ಯೋಗಿ ಮುಕ್ತ ಗೊರಖ್​ಪುರ’ ಎಂಬ ಅರ್ಥದ ಟ್ವೀಟ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ರಾಹುಲ್ ವಿರುದ್ಧ ರೈತರ ಆಕ್ರೋಶ

ಅಮೇಠಿ: ರಾಜೀವ್ ಗಾಂಧಿ ಟ್ರಸ್ಟ್​ಗೆ ನೀಡಿದ ಭೂಮಿ ವಾಪಸು ಮಾಡಿ, ಇಲ್ಲವಾದರೆ ಸೂಕ್ತ ನೌಕರಿ ನೀಡಿ ಎಂದು ಒತ್ತಾಯಿಸಿ ನೂರಾರು ರೈತರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಅಮೇಠಿ ಜಿಲ್ಲೆಯ ಗೌರಿಗಂಜ್​ನಲ್ಲಿ ರೈತರು ‘ನಮಗೆ ರಾಹುಲ್ ನಡೆಯಿಂದ ತೀವ್ರ ಅಸಮಾಧಾನವಾಗಿದೆ, ಅವರು ಇಟಲಿಗೆ ಮರಳುವುದು ಒಳಿತು. ಅವರಿಗೆ ಭಾರತದಲ್ಲಿ ಇರುವ ಅರ್ಹತೆ ಇಲ್ಲ. ನಮ್ಮ ಭೂಮಿ ನುಂಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಗೆ ಪ್ರಚಾರಕ್ಕಾಗಿ ಸ್ವಕ್ಷೇತ್ರಕ್ಕೆ ರಾಹುಲ್ ಭೇಟಿ ನೀಡಿದ ಸಂದರ್ಭದಲ್ಲೇ ಪ್ರತಿಭಟನೆ ನಡೆದಿದೆ.

ಏಕೆ ಪ್ರತಿಭಟನೆ?: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಮೇಠಿಯಲ್ಲಿ ಸಾಮ್ರಾಟ್ ಸೈಕಲ್ ಕಾರ್ಖಾನೆ ಉದ್ಘಾಟಿಸಿದ್ದರು. ಕಾರ್ಖಾನೆ ಮಾಲೀಕರಿಗೆ 1980ರಲ್ಲಿ 65.57 ಎಕರೆ ಭೂಮಿಯನ್ನು ಸರ್ಕಾರ ನೀಡಿತ್ತು. ಆದರೆ ನಷ್ಟ ಅನುಭವಿಸಿದ್ದರಿಂದ ಕಾರ್ಖಾನೆ ಮುಚ್ಚಲಾಯಿತು. ಕಾರ್ಖಾನೆಯಿದ್ದ ಭೂಮಿಯನ್ನು ಉ.ಪ್ರ. ಕೈಗಾರಿಕೆ ಅಭಿವೃದ್ಧಿ ಮಂಡಳಿಯಿಂದ (ಯುಪಿಎಸ್​ಐಡಿಸಿ) ಲೀಸ್ ನೀಡಲಾಗಿತ್ತು. ಸಾಲ ವಸೂಲಾತಿ ನ್ಯಾಯಾಧಿಕರಣ 2014ರಲ್ಲಿ 20.10 ಕೋಟಿ ರೂ.ಗೆ ಭೂಮಿ ಹರಾಜು ಹಾಕಿತ್ತು. ಭೂಮಿಯನ್ನು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಖರೀದಿಸಿತ್ತು. ಹರಾಜು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದಾಗ, ಇಡೀ ಪ್ರಕ್ರಿಯೆ ಅಕ್ರಮ ಎಂದು ತೀರ್ಪು ಹೊರಬಿದ್ದ ಕಾರಣ ಭೂಮಿಯನ್ನು ಯುಪಿಎಸ್​ಐಡಿಸಿಗೆ ಹಿಂದಿರುಗಿಸಬೇಕಿದೆ. ಆದರೆ ಟ್ರಸ್ಟ್ ಭೂಮಿ ಹಿಂದಿರುಗಿಸಿಲ್ಲ.