ಪಠ್ಯಕ್ರಮ ಚೌಕಟ್ಟು ಪರಿಷ್ಕರಣೆಗೆ ಎನ್​ಸಿಇಆರ್​ಟಿ ಸಜ್ಜು

ನವದೆಹಲಿ: ದೇಶದ ಶೈಕ್ಷಣಿಕ ರಂಗದಲ್ಲಿ ದೊಡ್ಡ ಸುಧಾರಣೆಗೆ ಮುಂದಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿ (ಎನ್​ಸಿಇಆರ್​ಟಿ), 2005ರಲ್ಲಿ ರೂಪಿಸಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್​ಸಿಎಫ್) ಪರಿಷ್ಕರಣೆಗೆ ಮುಂದಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಎನ್​ಸಿಎಫ್ ಪರಿಷ್ಕರಣೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಮಿತಿ ರಚಿಸಲಾಗಿದ್ದು, ಎನ್​ಸಿಎಫ್ ಸುಧಾರಣೆಯ ಪ್ರಾಥಮಿಕ ಹಂತದ ಕಾರ್ಯವನ್ನು ಶೀಘ್ರದಲ್ಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಎನ್​ಸಿಇಆರ್​ಟಿ ನಿರ್ದೇಶಕ ಹೃಷಿಕೇಶ್ ಸೇನಾಪತಿ ಖಚಿತ ಪಡಿಸಿದ್ದಾರೆ.

‘ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ದೃಷ್ಟಿಕೋನದಲ್ಲೂ ಬದಲಾವಣೆಯಾಬೇಕು. ಅನುಭವ ಜನ್ಯ ಕಲಿಕೆಗೆ ಒತ್ತು ನೀಡಬೇಕು. ಹೀಗಾಗಿ 15 ವರ್ಷಗಳ ಹಿಂದೆ ರೂಪುಗೊಂಡ ಎನ್​ಸಿಎಫ್​ನಲ್ಲಿ ಸುಧಾರಣೆ ಮಾಡುವ ಮೂಲಕ ಪಠ್ಯಪುಸ್ತಕವನ್ನು ತರ್ಕಬದ್ಧವಾಗಿ ರೂಪಿಸಲಾಗುತ್ತದೆ. ಈ ಪ್ರಕ್ರಿಯೆಗೆ ಒಂದು ವರ್ಷ ಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳ 42 ಲಕ್ಷ ಶಿಕ್ಷಕರಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ಏನಿದು ಎನ್​ಸಿಎಫ್?

ಪಠ್ಯಕ್ರಮ ಹೇಗಿರಬೇಕು, ಪಠ್ಯಪುಸ್ತಕದ ಬರವಣಿಗೆ ಶೈಲಿ ಯಾವ ರೀತಿಯಲ್ಲಿರಬೇಕು, ಶಿಕ್ಷಣ ಯಾವ ರೀತಿ ಇರಬೇಕು ಎಂಬ ಮಾರ್ಗದರ್ಶಿ ಒಳಗೊಂಡಿರುವ ಎನ್​ಸಿಎಫ್, ದೇಶದ ಶೈಕ್ಷಣಿಕ ಕೈಪಿಡಿಯಾಗಿದೆ. ಇದುವರೆಗೆ 1975, 1988, 2000 ಮತ್ತು 2005ರಲ್ಲಿ ನಾಲ್ಕು ಎನ್​ಸಿಎಫ್​ಗಳು ಪ್ರಕಟಗೊಂಡಿವೆ.