ಬೆಳಗಾವಿ: ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಿ

ಬೆಳಗಾವಿ:  ಶಾಲಾ -ಕಾಲೇಜು ಕಲಿಕಾ ಹಂತದಿಂದಲ್ಲೇ ಎನ್‌ಸಿಸಿ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಜೂನಿಯರ್ ಲೀಡರ್ ವಿಂಗ್ ಕಮಾಂಡೆಂಟ್ ಮೇಜರ್ ಜನರಲ್ ಅಲೋಕ ಕಕ್ಕೇರ ಹೇಳಿದ್ದಾರೆ.

ನಗರದ ಕ್ಯಾಂಪ್ ಪ್ರದೇಶದ ಕಾರ್ಗಿಲ್ ಸಭಾಂಗಣದಲ್ಲಿ ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರ್ ವತಿಯಿಂದ ಗುರುವಾರ ಆಯೋಜಿಸಿದ್ದ ಎನ್‌ಸಿಸಿ ಕೆಡೆಟ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಎನ್‌ಸಿಸಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಳೆದ 15 ವರ್ಷಗಳ ಬಳಿಕ ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರ್ ಎನ್‌ಸಿಸಿ ಕೆಡೆಟ್‌ಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಮತ್ತು ಬ್ಯಾನರ್ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಕರ್ನಲ್ ಕೆ.ವಿ.ಶ್ರೀನಿವಾಸ ಮಾತನಾಡಿ, ಕರ್ನಾಟಕ ರಾಜ್ಯದದಿಂದ 70335 ಎನ್‌ಸಿಸಿ ಕೆಡೆಟ್‌ಗಗಳು, ಗೋವಾದಿಂದ 3774 ಎನ್‌ಸಿಸಿ ಕೆಡೆಟ್‌ಗಳ ಪೈಕಿ 106 ಎನ್‌ಸಿಸಿ ಕೆಡೆಟ್‌ಗಳು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದರು. ಕರ್ನಾಟಕದಲ್ಲಿ ರಾಯಚೂರ, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಎನ್‌ಸಿಸಿ ತರಬೇತಿ ಅಕಾಡೆಮಿಗಳನ್ನು ಸ್ಥಾಪನೆ ಪ್ರಗತಿ ಹಂತದಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿವೆ. ಎನ್‌ಸಿಸಿ ಕೆಡೆಟ್‌ಗಳಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶದಲ್ಲಿ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.