ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಟೈಟಲ್ ಮೂಲಕ ಆಗಾಗ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ‘ಎಚ್ಚರಿಕೆ’, ‘ಶ್..ಎಚ್ಚರಿಕೆ’, ಇತ್ತೀಚೆಗಷ್ಟೇ ತೆರೆಕಂಡ ‘ಅಪಾಯವಿದೆ ಎಚ್ಚರಿಕೆ’ ಹೀಗೆ ಭಿನ್ನ, ವಿಭಿನ್ನ ಟೈಟಲ್ ಮೂಲಕ ಸಿನಿಮಾ ತಂಡಗಳು ಗಮನಸೆಳೆದಿವೆ. ಇದಕ್ಕೆ ಹೊಸ ಸೇರ್ಪಡೆ ‘ನಾಯಿ ಇದೆ ಎಚ್ಚರಿಕೆ’. ನಗರ ಪ್ರದೇಶದ ಬಹುತೇಕ ಮನೆಗಳ ಮುಂದೆ ಈ ಲಕವನ್ನು ನೋಡಿರುತ್ತೇವೆ. ಆದರೆ, ಇಲ್ಲಿ ನಾಯಿ ಇದೆ ಎಂದು ಎಚ್ಚರಿಸುತ್ತಿಲ್ಲ, ಬದಲಾಗಿ ನಾಯಿ ಕಡಿತದಿಂದ ಬರುವ ರೇಬಿಸ್ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದೇ ಎಳೆಯನ್ನು ಇಟ್ಟುಕೊಂಡು ಹಾರರ್, ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಮೂಲಕ ನಿರ್ದೇಶಕ ಕಲಿಗೌಡ ಕಥೆಯನ್ನು ನಿರೂಪಿಸಿದ್ದಾರೆ. ವೈದ್ಯರಾಗಿರುವ ಡಾ.ಲೀಲಾ ಮೋಹನ್ ಈ ಚಿತ್ರದ ನಾಯಕ ನಟ. ಪ್ರಮೋದ್ ಶೆಟ್ಟಿ, ದಿವ್ಯಶ್ರೀ, ಮಾನಸಾ, ಬಲ ರಾಜವಾಡಿ ಕಲಾ ಬಳಗದಲ್ಲಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಂದ್ರಜಿತ್ ಲಂಕೇಶ್, ನಟ ಪ್ರಥಮ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಕಲಿಗೌಡ, ‘ಇದು ನನ್ನ ನಿರ್ದೇಶನದ ಎರಡನೇ ಸಿನಿಮಾ. ಇಂಗ್ಲೀಷ್ ಸಿನಿಮಾ ನೋಡಬೇಕಾದರೆ ಈ ಕಥೆಗೆ ನನಗೆ ಹೊಳೆದಿದ್ದು. ರೇಬಿಸ್ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನ ಇಲ್ಲಿದೆ. ಹಾಗೆಯೇ ನಿಯತ್ತಿಗೆ ಹೆಸರಾಗಿರುವ ನಾಯಿ, ಸತ್ತ ಮೇಲೂ ಅದರ ನಿಯತ್ತು ಕಡಿಮೆ ಆಗಲ್ಲ ಎಂಬುದನ್ನು ತೋರಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ಲೀಲಾ ಮೋಹನ್, ‘ಈ ಚಿತ್ರದಲ್ಲೂ ವೈದ್ಯನ ಪಾತ್ರದಲ್ಲಿ ನಟಿಸಿದ್ದೇನೆ. ನಾಯಿ ಹಾಗೂ ಮನುಷ್ಯನ ಸಂಬಂಧದ ಕುರಿತ ಚಿತ್ರವಿದು. ಸಸ್ಪೆನ್ಸ್, ಹಾರರ್ ಅಂಶಗಳೂ ಇವೆ’ ಎಂದರು.