More

    ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ನಯನಾ

    ಕಾರವಾರ: ದಕ್ಷಿಣ ಕೋರಿಯಾದಲ್ಲಿ ಜೂನ್ 4 ರಿಂದ 7ರವರೆಗೆ ಆಯೋಜನೆಯಾಗಿರುವ 20 ವರ್ಷದೊಳಗಿನ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಮುಂಡಗೋಡಿನ ಚಳಗೇರಿ ಗ್ರಾಮದ ನಯನಾ ಕೊಕರೆ ಅವರು ಆಯ್ಕೆಯಾಗಿದ್ದಾರೆ.


    ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ತಮಿಳುನಾಡಿನ ತಿರುವನ್ನಮಲೈನಲ್ಲಿ ಏಪ್ರಿಲ್ 28 ರಿಂದ 30ರವರೆಗೆ ನಡೆದ 21ನೇ ಕಿರಿಯರ ರಾಷ್ಟ್ರೀಯ ೆಡರೇಶನ್ ಕಪ್‌ನಲ್ಲಿ ನಯನಾ ಕೊಕರೆ ಭಾಗವಹಿಸಿ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದಿದ್ದರು.


    ಗೌಳಿ ಜನಾಂಗದ ಗಂಗಾರಾಮ ಹಾಗೂ ಗಂಗುಬಾಯಿ ಕೊಕರೆ ಅವರ ಪುತ್ರಿಯಾಗಿರುವ ನಯನಾ ಇತ್ತೀಚೆಗೆ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದಾಳೆ. ಈ ಹಿಂದೆ 2022 ನವೆಂಬರ್‌ನಲ್ಲಿ ಆಸ್ಸಾಂನಲ್ಲಿ ನಡೆದ 37ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 400 * 100 ಮೀಟರ್ ರಿಲೇಯಲ್ಲಿ ತತೀಯ ಸ್ಥಾನ ಪಡೆದಿದ್ದಳು.


    2022ರಲ್ಲಿ ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯಲ್ಲಿ ನಡೆದ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 200 ಮೀಟರ್ ಓಟದಲ್ಲಿ ತತೀಯ ಸ್ಥಾನ ಪಡೆದಿದ್ದಳು. 2022ರ ಅಕ್ಟೋಬರ್ 12ರಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಳು.


    ಸ್ವಂತ ಊರು ಚಳಗೇರಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ಕಾತೂರಿನಲ್ಲಿ ಹೈಸ್ಕೂಲ್ 8 ಮತ್ತು 9ನೇ ತರಗತಿ ಹಾಗೂ ಲೊಯಲಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದ್ದಳು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅವಧಿಯಲ್ಲಿಯೂ ಆಕೆ ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿದ್ದು, ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts