ಮದುವೆ ಮನೆಯಲ್ಲಿ ಪರಿಸರ ಪ್ರೇಮ

ನಾಯಕನಹಟ್ಟಿ: ಪಟ್ಟಣದಲ್ಲಿ ಒಳಮಠದ ಸಮುದಾಯ ಭವನದಲ್ಲಿ ಸರಳವಾಗಿ ಜರುಗಿದ ವಿವಾಹದಲ್ಲಿ ಫಲತಾಂಬೂಲದೊಂದಿಗೆ ಸಾವಿರ ಸಸಿಗಳನ್ನು ವಿತರಿಸುವ ಮೂಲಕ ನವ ದಂಪತಿ, ಪರಿಸರ ಪ್ರೇಮ ಮೆರೆದಿದ್ದಾರೆ.

ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಆದರೆ, ಮದುವೆಯಲ್ಲಿ ಸಸಿ ವಿತರಿಸಿದ್ದು, ಸಾರ್ವಜನಿಕರ ಗಮನ ಸೆಳೆಯುವ ಜತೆ ಪರಿಸರ ಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಯಿತು.

ಪಟ್ಟಣದ ಬೊಮ್ಮೆನಹಳ್ಳಿ ಶಿವಣ್ಣನ ಮಗಳು ಮೈತ್ರಾ, ಹಿರಿಯೂರು ತಾಲೂಕು ತವಂದಿ ಸುನೀಲ್ ಅವರ ವಿವಾಹ ಭಾನುವಾರ ಒಳಮಠದ ಸಮುದಾಯ ಭವನದಲ್ಲಿ ಜರುಗಿತು. ಊಟದ ನಂತರ ಪ್ರತಿಯೊಬ್ಬರಿಗೂ ಸಸಿ ವಿತರಣೆ ಮಾಡುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಿದರು.

ದಂಪತಿಯಿಂದ ಸಸಿ ಪಡೆದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಸರ್ಜನ್ ಡಾ.ವಿಜಯಕುಮಾರ್ ಮಾತನಾಡಿ, ಅರಣ್ಯ ನಾಶದಿಂದ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಸಸಿ ಪಡೆದವರೆಲ್ಲರೂ ಅವುಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು ಎಂದು ಮನವಿ ಮಾಡಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್ ಮಾತನಾಡಿ, ಸರಳ ವಿವಾಹವೇ ಒಂದು ಮಾದರಿ. ಅದರಲ್ಲಿ ಪರಿಸರ ಪ್ರೇಮ ಎಲ್ಲರಿಗೂ ಅನುಕಣೀಯ ಎಂದರು.

ಗುಲಾಬಿ, ಮಲ್ಲಿಗೆ, ನುಗ್ಗೆ, ಹೊಂಗೆ, ಬುಕ್ಕೆ, ನೇರಳೆ ಸೇರಿ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಯಿತು. ಬೊಮ್ಮನಹಳ್ಳಿ ಗೀತಾ ಶಿವಣ್ಣ, ತವಂಧಿ ಇಂದ್ರಮ್ಮ, ವೀರಶೈವ ಸಮಾಜದ ಕಾರ್ಯದರ್ಶಿ ವಿ.ತಿಪ್ಪೇಶ್, ಪ.ಮ.ಗುರುಲಿಂಗಯ್ಯ ಇತರರಿದ್ದರು.

Leave a Reply

Your email address will not be published. Required fields are marked *