ಹವಾಮಾನಕ್ಕೆ ತಕ್ಕ ಬೆಳೆ ಬೆಳೆಯಿರಿ: ಪ್ರಗತಿಪರ ರೈತ ಸಜ್ಜನ್ ಅನಿಸಿಕೆ

ನಾಯಕನಹಟ್ಟಿ: ರೈತರು ಆಯಾ ಪ್ರದೇಶದ ಹವಾಗುಣಕ್ಕೆ ತಕ್ಕ ಬೆಳೆ ಬೆಳೆಯುವುದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ ಎಂದು ಕೂಡ್ಲಿಗಿ ತಾಲೂಕು ಹುಲಿಕೆರೆಯ ಪ್ರಗತಿಪರ ರೈತ ಎಚ್.ವಿಶ್ವೇಶ್ವರ ಸಜ್ಜನ್ ಹೇಳಿದರು.

ಸಮೀಪದ ಎನ್.ಗೌರೀಪುರದಲ್ಲಿ ಶನಿವಾರ ಕೃಷಿ ಇಲಾಖೆ ಆಯೋಜಿಸಿದ್ದ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಕನಸು ಕಾಣಬೇಕು. ಅದು ನನಸಾಗುವವರೆಗೆ ಪ್ರಯತ್ನಪಟ್ಟರೆ ಪ್ರಗತಿ ಸಾಧ್ಯ. ಬಯಲು ಸೀಮೆ ಶುಷ್ಕ ವಾತಾವರಣದ ಪ್ರದೇಶ. ಇಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ. ಇಂತಹ ವಾತಾವರಣಕ್ಕೆ ತಕ್ಕ ಬೆಳೆಗಳನ್ನಷ್ಟೇ ಬೆಳೆಯಬೇಕು ಎಂದರು.

ಮಲೆನಾಡಿನಲ್ಲಿ ರೈತರು ಸದಾ ಹೊಲದಲ್ಲಿಯೇ ಇರುತ್ತಾರೆ. ಆದರೆ, ನಮ್ಮಲ್ಲಿ ಯಾವಾಗಲೂ ಊರಿನ ಹರಟೆ ಕಟ್ಟೆಯಲ್ಲಿರುತ್ತಾರೆ. ಹೀಗಾಗಿಯೇ ನಮ್ಮಿಂದ ನಿರೀಕ್ಷಿತ ಆದಾಯ ಪಡೆಯಲು ಆಗುತ್ತಿಲ್ಲ. ಬೆಳೆ ಕೈ ಸೇರುವವರೆಗೆ ಹೊಲದತ್ತ ಸದಾ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.

ದೇಸಿ ಹೈನುಗಾರಿಕೆಯಿಂದ ತುಂಬಾ ಲಾಭವಿದೆ. ಜೆರ್ಸಿ ತಳಿಯಿಂದ ನಷ್ಟ ಹೆಚ್ಚು. ಗೋಮೂತ್ರ, ಬೆರಣಿಯಿಂದ ವಿಭೂತಿ ಮುಂತಾದವುಗಳನ್ನು ತಯಾರಿಸಿ ಮಾರುವುದರಿಂದ ಹೆಚ್ಚು ಲಾಭ ಪಡೆಯಬಹುದು ಎಂದರು.

ಬಯಲು ಸೀಮೆಗೆ ಬೆಳವಲಗಿಡ ತುಂಬಾ ಪ್ರಯೋಜನಕಾರಿ. ಈ ಕಾಯಿಯಿಂದ ತಯಾರಿಸಿದ ಪೌಡರ್‌ನಿಂದ ಟೀ, ಕಷಾಯ ಮಾಡುವ ವಿಧಾನ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಮಾರುತಿ ಮಾತನಾಡಿ, ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ ನೋಂದಣಿ ಕಡ್ಡಾಯ. ಇದರಿಂದ ಪದೇ ಪದೆ ದಾಖಲೆಗಳನ್ನು ಒದಗಿಸುವುದು ತಪ್ಪುತ್ತದೆ. ಒಮ್ಮೆ ನೋಂದಣಿ ಮಾಡಿಸಿದರೆ ಬೀಜ, ಗೊಬ್ಬರ ಇನ್ನಿತರ ಸೌಲಭ್ಯ ಪಡೆಯಲು ಅನುಕೂಲಕರ ಎಂದರು.

ಚಿತ್ರದುರ್ಗ ಮಣ್ಣು ಆರೋಗ್ಯ ಕೇಂದ್ರದ ಕುಮಾರ್ ಮಾತನಾಡಿ, ಮಣ್ಣು ಪರೀಕ್ಷೆಗೆ ಗೌರೀಪುರವನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರತಿ ರೈತರ ಜಮೀನಿನ ಮಣ್ಣು ಪರೀಕ್ಷಿಸಿ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆಂಚೋಜಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಶ್ರೀನಿವಾಸ್, ಕೃಷಿ ಅಧಿಕಾರಿ ಎನ್.ಗಿರೀಶ್, ಸಹಾಯಕ ಕೃಷಿ ಅಧಿಕಾರಿ ಶ್ರೀನಿವಾಸ್, ರೈತ ಮುಖಂಡರಾದ ಬಿ.ಎಂ.ತಿಪ್ಪೇಸ್ವಾಮಿ, ಶಿವಾನಂದಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *