ತಿಮ್ಮಪ್ಪಯ್ಯನಹಳ್ಳಿಯಲ್ಲಿ ಬಸವ ಜಯಂತಿ

ನಾಯಕನಹಟ್ಟಿ: ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರ ಅನುಭವ ಮಂಟಪ ಪ್ರೇರಣೆಯಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವೀರೇಶ್ ಕುಮಾರ್ ಹೇಳಿದರು.

ತಿಮ್ಮಪ್ಪಯ್ಯನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನ ನಡೆಸಿದರು ಎಂದರು.

ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಸಮನವಾದ ಅವಕಾಶವಿತ್ತು. ಅನುಭವ ಮಂಟಪದಲ್ಲಿ ಎಲ್ಲ ಜಾತಿಗಳಿಗೆ ಹಾಗೂ ಮಹಿಳೆಯರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಮೌಢ್ಯ, ಅಂಧ ಶ್ರದ್ಧೆಗಳ ವಿರುದ್ಧ ಪರಿವರ್ತನೆಯ ಹೋರಾಟ ನಡೆಸಿದ್ದರು ಎಂದು ತಿಳಿಸಿದರು.

ಶ್ರಮವಿಭಜನೆ ಆಧಾರದ ಸಮಾಜಕ್ಕೆ ಮಿಗಿಲಾಗಿ ಸೇವೆಯ ಮಹತ್ವವನ್ನು ಅವರು ಸಾರಿದರು. ಮಾದಾರ ಚನ್ನಯ್ಯ, ಮೋಳಿಗೆ ಮಾರಯ್ಯ ಸೇರಿ ಸಮಾಜದಲ್ಲಿನ ಎಲ್ಲ ಜನರಿಗೆ ಸೇವೆ ಸಲ್ಲಿಸುವ ವೃತ್ತಿಪರ ಜನರಿಗೆ ವಿಶೇಷ ಆದ್ಯತೆ ನೀಡಿದರು.

ತುಳಿತಕ್ಕೆ ಒಳಗಾದ ಜನರನ್ನು ಮೇಲೆತ್ತುವ ಹಾಗೂ ಕಾಯಕದ ಮಹತ್ವವನ್ನು ವಿವರಿಸಿದ್ದರು. ದೇವರು, ಧರ್ಮದ ಹೆಸರಿನಲ್ಲಿ ಶೋಷಣೆ ವಿರುದ್ಧ ಜನಜಾಗೃತಿ ಮೂಡಿಸಿದರು. ಇಷ್ಟಲಿಂಗ ಪೂಜೆ ಮಾತ್ರ ಸರಿಯಾದ ಆಚರಣೆ ಎಂಬುದು ವಚನಕಾರರ ನಿಲುವಾಗಿತ್ತು. ಎಂದರು.

ಗಜ್ಜುಗಾನಹಳ್ಳಿ ಕೆ.ನಾಗರಾಜ್ ಹಾಗೂ ಗೌರಮ್ಮ ಬಸವ ಧರ್ಮ ಧ್ವಜಾರೋಹಣ ನೆರವೇರಿಸಿದರು. ಗಂಜಿಗಟ್ಟಿ ಕೃಷ್ಣಮೂರ್ತಿ ಮತ್ತು ಸಂಗಡಿಗರು ಬಸವ ತತ್ವ ಹಾಗೂ ಲಾವಣಿಗಳನ್ನು ಹಾಡಿದರು.

ಮುಖಂಡರಾದ ಬಸವರಾಜಯ್ಯ, ಸತೀಶ್, ಬಸವರಾಜ್, ವಿಜಯಕುಮಾರ್, ಪ್ರಸನ್ನಕುಮಾರ್, ಎಲೆಯಾರ್, ಕೆ.ಎಸ್.ತಿಪ್ಪೇಸ್ವಾಮಿ, ರಾಜಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *