ನಾಯಕನಹಟ್ಟಿ: ಶಾಲೆಗಳಲ್ಲಿ ಆಚರಿಸುವಂತಹ ದಾರ್ಶನಿಕರ ದಿನಾಚರಣೆ ವೇಳೆ, ಮಕ್ಕಳಲ್ಲಿ ಆದರ್ಶ ವ್ಯಕ್ತಿಗಳ ಚಿಂತನೆ ಬಿತ್ತುವ ಕೆಲಸ ಆಗಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ತಿಪ್ಪೇರುದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಪ್ರಾಥಮಿಕ ಶಾಲೆಯಿಂದ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಖಾಸಗೀಕರಣದ ನಂತರ ನಿರುದ್ಯೋಗ ಹೆಚ್ಚಾಗಿದೆ. ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗಿದ್ದು, ಇದರಿಂದ ಹೊರಬರಬೇಕಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ ಜನರಿದ್ದಾರೆ. ಆದರೆ, ಇಲ್ಲಿನ ಪ್ರದೇಶದಲ್ಲಿ ಸೌಲಭ್ಯಗಳ ಕೊರತೆಯಿದೆ. ಆದ್ದರಿಂದ ಕುಡಿಯುವ ನೀರು, ಶಾಲಾ ಕಟ್ಟಡಗಳು ಸೇರಿ ಮೂಲ ಸೌಲಭ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಎಂಎಲ್‌ಸಿ ಜಯಮ್ಮ ಬಾಲರಾಜ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಮಹಿಳೆಯರಿಗೆ ಪೂರ್ಣ ಪ್ರಮಾಣದ ಅವಕಾಶ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರನ್ನು ಹಾಗೂ ರಾಷ್ಟ್ರಪತಿ ಪದಕ ಪುರಸ್ಕೃತ, ಶಾಲೆಯ ಹಳೇ ವಿದ್ಯಾರ್ಥಿ ಡಿವೈಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ಅವರನ್ನು ಗೌರವಿಸಲಾಯಿತು.
ಜಿಪಂ ಸದಸ್ಯರಾದ ಓಬಳೇಶ್, ಒ.ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ರಾಮರೆಡ್ಡಿ, ಸಂಸ್ಥೆಯ ಅಧ್ಯಕ್ಷ ಕಲ್ಲಪ್ಪರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ಖಜಾಂಚಿ ರಸೂಲ್ ಬಾಷಾ, ನಿರ್ದೇಶಕ ಕೆ.ರುದ್ರಮುನಿಯಪ್ಪ, ಎನ್.ಎಂ.ಕೊಟ್ರಯ್ಯ, ಮುಖ್ಯಶಿಕ್ಷಕ ಬಿ.ರಮೇಶ್ ಮತ್ತಿತರರಿದ್ದರು.