ನಾಯಕನಹಟ್ಟಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು, ಅವುಗಳ ಸಬಲೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಎ.ನಾರಾಯಣ ಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಭೇಟಿ ನೀಡಿ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ಮಾತನಾಡಿ, ಶಾಲೆಗೆ ಕಟ್ಟಡ ಸೇರಿ ಅಗತ್ಯ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ನೆರವು ನೀಡಲಾಗುವುದು. ಅದರಲ್ಲೂ ದಲಿತ ಕಾಲನಿಯ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಶಿಕ್ಷಣ ಸಚಿವರು ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.
ಜಿಪಂ ಸದಸ್ಯ ಟಿ.ಓಬಳೇಶ್, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಯುವ ಮುಖಂಡ ಟಿ.ಶಿವದತ್ತ, ಮುತ್ತುರಾಜ್, ಸಚಿನ್, ಎಸ್. ಬಾಬು, ತಿಪ್ಪೇಸ್ವಾಮಿ, ಓಬಳೇಶ ಪಿಎಸ್‌ಐ ರಘುನಾಥ್, ಮುಖ್ಯಶಿಕ್ಷಕ ನಾಗರಾಜ್ ಇತರರಿದ್ದರು.
ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿಗೆ ಮನವಿ: ದಲಿತ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಒಂದೂವರೆ ಎಕರೆಯಷ್ಟು ವಿಶಾಲ ಸ್ಥಳವಿದ್ದು, 30 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಂಜೂರು ಮಾಡಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಟಿ.ಬಸವರಾಜ, ಉಮೇಶ ಇತರರು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಂಸದರು, ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.