ಗಣಿತ ಕಬ್ಬಿಣದ ಕಡಲೆಯಲ್ಲ

ನಾಯಕನಹಟ್ಟಿ: ಸುಲಭವಾಗಿ ಅರ್ಥವಾಗುವ ಮಾದರಿಯಲ್ಲಿ ಗಣಿತ ಬೋಧಿಸುವ ಮೂಲಕ, ಅದು ಕಬ್ಬಿಣದ ಕಡಲೆಯಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಂಜಣ್ಣ ತಿಳಿಸಿದರು.

ಪಟ್ಟಣದ ಎಸ್‌ಟಿಎಸ್‌ಆರ್ ಪ್ರೌಢಶಾಲೆಯಲ್ಲಿ ಹೋಬಳಿ ಗಣಿತ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ಗಣಿತ ಕಲಿಕಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಗಣಿತ ಸೂತ್ರಾಧಾರಿತ ಕಲಿಕೆಯಾಗಿದೆ. ಈ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರೆ, ಕಲಿಕೆ ಸರಳವಾಗುತ್ತದೆ. ಸರಳ ಮಾರ್ಗದಲ್ಲಿ ಇವುಗಳನ್ನು ಮಕ್ಕಳಿಗೆ ಅರ್ಥೈಸಿದರೆ, ಗಣಿತದ ಬಗ್ಗೆ ಇರುವ ತಪ್ಪು ಕಲ್ಪನೆ ದೂರವಾಗಿ ಆಸಕ್ತಿಕರ ವಿಷಯವಾಗುತ್ತದೆ ಎಂದರು.

ವೈಜ್ಞಾನಿಕ ಯುಗದಲ್ಲಿ ಗಣಿತ ಎಲ್ಲ ವಿಭಾಗಗಳಲ್ಲೂ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಬೋಧನೆ ಪದ್ಧತಿ ಸರಳಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಿರೀಶ್ ಮಾತನಾಡಿ, ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಪ್ರತಿ ಶಾಲೆಗೂ ಗಣಿತದ ಕಿಟ್ ವಿತರಿಸಲಾಗಿದೆ. ಪರಿಣಾಮಕಾರಿ ಬೋಧನಾ ಪದ್ಧತಿಗೆ ಅವುಗಳ ಸದ್ಬಳಕೆಯಾಗಲಿ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್, ಶಶಿಧರ, ಲಿಂಗರಾಜ್ ಈಶ್ವರಪ್ಪ, ಮುಖ್ಯಶಿಕ್ಷಕರಾದ ಸಿದ್ದಪ್ಪ ನಿಲುವಂಜಿ, ಎಚ್.ಗಂಗಣ್ಣ ಇತರರಿದ್ದರು.