ವಚನಗಳ ಸಾರ ಅರಿತುಕೊಳ್ಳಬೇಕು: ಶ್ರೀ ಮುರುಘಾ ಶರಣರ ಕಿವಿಮಾತು

ನಾಯಕನಹಟ್ಟಿ: ವಚನಗಳು ಜನಸಾಮಾನ್ಯರ ಜೀವನ ರೂಪಿಸುವ ಸಂವಿಧಾನವಿದ್ದಂತೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಎನ್.ದೇವರಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಸಮ ತತ್ವದಡಿ ದೇಶಕ್ಕೆ ಸಂವಿಧಾನ ನೀಡಿದರೆ, 12ನೇ ಶತಮಾನದ ವಚನಕಾರರು ಆದರ್ಶದ ಬದುಕು ರೂಪಿಸುವ ಸಂವಿಧಾನದ ಸಾರವನ್ನು ವಚನಗಳ ಮೂಲಕ ಅರ್ಥೈಸಿಕೊಟ್ಟಿದ್ದಾರೆ ಎಂದರು.

ವಚನಗಳೆಂದರೆ ನಿತ್ಯ ಜೀವನ ವಿಧಾನ. ಅವುಗಳ ಸಾರ ಅರಿತು ಬದುಕ ಬೇಕು. ಅಂದಿನ ಮೂಲಭೂತವಾದಿಗಳು ಶರಣರನ್ನಷ್ಟೇ ಅಲ್ಲದೇ ವಚನಗಳ ನಾಶಕ್ಕೂ ಪ್ರಯತ್ನಿಸಿದ್ದರು.

ಆ ಸಮಯದಲ್ಲಿ ಸಾಕಷ್ಟು ವಚನಗಳು ನಾಶಗೊಂಡಿವೆ. ಉಳಿದವುಗಳನ್ನು ಪ.ಗು.ಹಳಕಟ್ಟಿಯಂತಹ ವಿದ್ವಾಂಸರು ಸಂಗ್ರಹಿಸಿ ಅವುಗಳ ಮಹತ್ವ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ, 12ನೇ ಶತಮಾನದ ಬಸವಣ್ಣನನ್ನು ನಾವು ಕಂಡಿಲ್ಲ.ಬಸವ ತತ್ವವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮುರುಘಾ ಶರಣರನ್ನು ಕಂಡಿದ್ದೇವೆ. ಬಸವತತ್ವ ಪಪ್ರಸಾರದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು.

ದಾಬಸ್‌ಪೇಟೆ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಶಿರಗುಪ್ಪದ ಬಸವರಾಜ ಶರಣರು ಮಾತನಾಡಿದರು.

ಬಸವ ಕೇಂದ್ರದ ವಸಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಎಚ್.ಪಿ. ಶಶಿರೇಖಾ, ತಾಪಂ ಸದಸ್ಯ ತಿಪ್ಪೇಸ್ವಾಮಿ, ನಾಯಕನಹಟ್ಟಿ ಬಸವಕೇಂದ್ರದ ಫ.ಮ.ಗುರುಲಿಂಗಯ್ಯ, ಸ್ಥಳೀಯ ಜನಪ್ರತಿನಿಧಿಗಳು, ಬಸವ ಬಳಗದವರಿದ್ದರು.

Leave a Reply

Your email address will not be published. Required fields are marked *