ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ಬೊಮ್ಮಲಿಂಗೇಶ್ವರ ದೇವರ ಗುಗ್ಗರಿ ಹಬ್ಬದ ಪ್ರಯುಕ್ತ ಭಾನುವಾರ ದೈವದ ಪೆಟ್ಟಿಗೆಯನ್ನು ಗಂಗಾಪೂಜೆಗೆ ಕೊಂಡೊಯ್ಯುವ ಮೂಲಕ ಮೂರು ದಿನಗಳ ಜಾತ್ರೆಗೆ ಅದ್ದೂರಿ ಚಾಲನೆ ನೀಡಲಾಯಿತು.
ಮಲ್ಲೂರಹಳ್ಳಿಯಲ್ಲಿ ನಿರ್ಮಾಣಗೊಂಡ ಬೊಮ್ಮಲಿಂಗೇಶ್ವರ ದೇವಸ್ಥಾನ ಸುತ್ತಲೂ ಪೌಳಿ ಮಂಟಪ ಮಾಡಿ ಅದರಲ್ಲಿ ಶ್ರೀಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಬಳಿಕ ಕರಿ ಕಂಬಳಿ ಹೊದ್ದ ಕಿಲಾರಿಗಳು ಶಾಸ್ತ್ರೋಕ್ತವಾಗಿ ಗಂಗಾಪೂಜೆ ಮೆರವಣಿಗೆಗೆ ಚಾಲನೆ ನೀಡಿದರು.
ಜನಪದ ವಾದ್ಯಗಳಾದ ಉರುಮೆ, ನಗಾರಿ, ಶಂಖ, ಜಾಗಟೆಗಳ ನಿನಾದ ಒಂದೆಡೆಯಾದರೆ, ಹೆಂಗೆಳೆಯರು ದೇವರು ಸಾಗುವ ಮಾರ್ಗಕ್ಕೆ ನೀರೆರೆದು ಮಡಿ ಮಾಡುತ್ತಿದ್ದರು. ಹಿರಿಯ ಜೀವಗಳು ಹಾಡುತ್ತಿದ್ದ ಸೋಬಾನೆ ಪದ ಕೇಳುತ್ತ ಬೊಮ್ಮಲಿಂಗೇಶ್ವರ ದೇವರ ಪೆಟ್ಟಿಗೆ ಹೊತ್ತು ನಡೆಯುತ್ತಿದ್ದ ಪೂಜಾರಿಗೆ ನೆರೆದ ಭಕ್ತರೆಲ್ಲ ಕೈ ಮುಗಿದು ಭಕ್ತಿ ಸಮರ್ಪಿಸಿದರು.
ಗಂಗಾಪೂಜೆಗೆಂದು ಮಲ್ಲೂರಹಳ್ಳಿಯಿಂದ ಹೊರಟ ದೇವರ ಮೆರವಣಿಗೆ ಮುಸ್ಟಲಗುಮ್ಮಿ ಕೆರೆಗೆ ವರೆಗೆ ಎತ್ತಿನಗಾಡಿಗಳ ಮೂಲಕ ಸಾಗಿತು. ಸಂಪ್ರದಾಯದಂತೆ ಮಹಿಳೆಯರು, ದೈವಸ್ಥರು ದೇವರಿಗೆ ಗಂಗಾಪೂಜೆ ನೆರವೇರಿಸಿದರು. ಸಂಜೆ ಮೆರವಣಿಗೆ ಮೂಲಕ ದೇವರನ್ನು ಗ್ರಾಮಕ್ಕೆ ವಾಪಸು ಕರೆತಂದು ನೂತನ ದೇವಾಲಯ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವರೆತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೋಮವಾರ ಹರಿಸೇವೆ, ಪೌರಾಣಿಕ ನಾಟಕ, ಮಂಗಳವಾರ ಮಧ್ಯಾಹ್ನ ದೇವರೆತ್ತುಗಳ ಆಗಮನ, ಜಾತ್ರೆ ಕೊನೆ ದಿನವಾದ ಬುಧವಾರ ದೇವರನ್ನು ಕೊಂಡಾಡಿ ವಸಂತ ಪೂಜೆಯೊಂದಿಗೆ ಗುಡಿದುಂಬಿಸಿ ದೇವರೆತ್ತುಗಳ ಕಿಲಾರಿಗಳಿಗೆ ಉಡುಗೊರೆ ನೀಡುವ ಕಾರ್ಯಗಳು ಜರುಗಲಿವೆ.
ಗಂಗಾಪೂಜೆಯಲ್ಲಿ ಜಿಪಂ ಸದಸ್ಯ ಎಸ್.ಓ.ಮಂಜುನಾಥ, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಸಣ್ಣಪಾಲಯ್ಯ, ಬೊಮ್ಮಯ್ಯ, ತಿಪ್ಪಯ್ಯ, ಎಂ.ಎಸ್.ಬೊಮ್ಮಯ್ಯ, ತಮ್ಮಯ್ಯ, ಓಬಯ್ಯನಹಟ್ಟಿ ತಿಪ್ಪಯ್ಯ, ಜಯಣ್ಣ, ಕಾಕಸೂರಯ್ಯ, ಮಲ್ಲಿಕಾರ್ಜುನ, ಮಲ್ಲಯ್ಯ, ಕಾಮಯ್ಯ, ಸೂರಲಿಂಗಪ್ಪ ಇದ್ದರು.