ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೇಸರದ ಸಂಗತಿ ಎಂದು ಸಿಎಚ್‌ಸಿ ಆಪ್ತ ಸಮಾಲೋಚನೆ ಕೇಂದ್ರದ ಮುಖ್ಯಸ್ಥೆ ಸುಧಾ ತಿಳಿಸಿದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾತೃಶ್ರೀ, ಮಾತೃ ವಂದನಾ ಯೋಜನೆಗೆ ಅರ್ಜಿ ಸ್ವೀಕಾರ ಅಭಿಯಾನದಲ್ಲಿ ಮಾತನಾಡಿದರು.

ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಜನಿಸುವ ಶಿಶು ಸಹ ಅಪೌಷ್ಟಿಕತೆಯಿಂದ ಬಳಲುವ ಜತೆಗೆ ಕ್ಷಯ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಔಷಧೋಪಚಾರ ಪಡೆಯಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಗರ್ಭಿಣಿಯರಿಗೆ ಹಲವು ಸೌಲಭ್ಯಗಳಿವೆ. ಮಾತೃಶ್ರೀ ಯೋಜನೆಯಡಿ 6 ಸಾವಿರ ರೂ. ಪ್ರೋತ್ಸಾಹಧನವನ್ನು 2 ಹಂತಗಳಲ್ಲಿ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೂರು ಹಂತದಲ್ಲಿ 5 ಸಾವಿರ ರೂ. ಫಲಾನುಭವಿ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಅಂಗನವಾಡಿ ಮೇಲ್ವಿಚಾರಕಿ ಬಿ.ಜಯಶ್ರೀ ತಿಳಿಸಿದರು.

ಹಲವು ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಬಾಂಡ್ ಈ ವೇಳೆ ವಿತರಿಸಲಾಯಿತು.

ಸ್ಟಾಫ್ ನರ್ಸ್ ರತ್ನಾ, ಅಂಗನವಾಡಿ ಮೇಲ್ವಿಚಾರಕಿ ಬಿ.ಜಯಶ್ರೀ ಹಾಗೂ ನಾಯಕನಹಟ್ಟಿ, ನೆಲಗೇತನಹಟ್ಟಿ, ಅಬ್ಬೇನಹಳ್ಳಿ ಗ್ರಾಮ ವ್ಯಾಪ್ತಿಯ ಅಂಗನವಾಡಿ ಮೇಲ್ವಿಚಾರಿಕಿಯರು, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *