ನಾಯಕನಹಟ್ಟಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಬರಲಿರುವ ಹಿನ್ನೆಲೆಯಲ್ಲಿ ತಳಕು ಗ್ರಾಮದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಷ್ಟು ವರ್ಷ ಮೊಳಕಾಲ್ಮೂರು ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಶಾಸಕರಿಗೆ ಮಹತ್ವದ ಹುದ್ದೆ ಸಿಗಲಿದೆ. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ ಎಂದರು.
ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ತಳಕು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಜಿಪಂ ಸದಸ್ಯ ಟಿ.ಓಬಳೇಶ್, ತಾಪಂ ಸದಸ್ಯ ರಾಮರೆಡ್ಡಿ, ಬಿಜೆಪಿ ಉಸ್ತುವಾರಿ ಜಯಪಾಲಯ್ಯ, ಮಂಡಲ ಅಧ್ಯಕ್ಷ ಎಂವೈಟಿ ಸ್ವಾಮಿ, ಪ್ರ.ಕಾರ್ಯದರ್ಶಿ ಪಿ.ಶಿವಣ್ಣ, ಪಿ.ಬಿ.ತಿಪ್ಪೇಸ್ವಾಮಿ, ನಾಗರಾಜ್, ಸಿ.ಬಿ.ಮೋಹನ್ಕುಮಾರ್, ನಾಗೇಂದ್ರಪ್ಪ, ದಾಸಿರೆಡ್ಡಿ, ಮಲ್ಲೇಶ್, ರೂಪಾ ಇತರರಿದ್ದರು.