ನಾಯಕನಹಟ್ಟಿ: ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯ ಜ.6ರಿಂದ ಆರಂಭವಾಗಲಿದ್ದು, ಶಿಕ್ಷಕರು ಮನೆ, ಮನೆಗಳಿಗೆ ಭೇಟಿ ನೀಡಿ ಪಾಲಕ ಮನವೊಲಿಸುವ ಕೆಲಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಹೇಳಿದರು.
ಇಲ್ಲಿನ ಜೆಜೆಆರ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಶಾಲೆ ಬಿಟ್ಟ ಮಕ್ಕಳ ಬಗ್ಗೆ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಇಲಾಖೆಗೆ ಸೂಚನೆ ನೀಡಿದೆ. ಇಲಾಖೆಯ ಎಲ್ಲ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಬೇಕಿದೆ. ಆದರೆ, ಅಲ್ಲಿಯೂ ಕೆಲ ಲೋಪಗಳಾಗಿ ಅಂಕಿ ಅಂಶಗಳಲ್ಲಿ ವ್ಯತ್ಯಾಸವಾಗಿದೆ. ಇಂತಹ ತಪ್ಪು ಮರುಕಳಿಸದಂತೆ ಶಾಲೆ, ಕ್ಲಸ್ಟರ್ ಹಂತದಲ್ಲಿ ಎಚ್ಚರ ವಹಿಸಬೇಕು ಎಂದರು.
ಕಳೆದ ಬಾರಿ 10ನೇ ತರಗತಿ ಫಲಿತಾಂಶದಲ್ಲಿ ಚಿತ್ರದುರ್ಗ, ಚಳ್ಳಕೆರೆ ತಾಲೂಕು ಉತ್ತಮ ಸಾಧನೆ ಮಾಡಿವೆ. ಈ ಬಾರಿ ಅದು ಮುಂದುವರಿಯಬೇಕು. ಈ ತಿಂಗಳಿನಿಂದ ಪುನರಾವರ್ತಿತ ಪಾಠ ಮಾಡಿ ಮಕ್ಕಳಿಗೆ ಪಠ್ಯ ವಿಷಯದ ಬಗ್ಗೆ ಯಾವುದೇ ಸಂದೇಹ ಬಾರದಂತೆ ಶಿಕ್ಷಕರು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಹಂತದಲ್ಲಿ ಶನಿವಾರ ಹತ್ತನೇ ತರಗತಿ ಮಕ್ಕಳಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ. ಅಲ್ಲಿ ರಾಜ್ಯಮಟ್ಟದ ಸಮಾಲೋಚಕರು ಆಗಮಿಸುವುದರಿಂದ ಮಕ್ಕಳು ಭಾಗವಹಿಸಿ ಪರೀಕ್ಷೆ ಬಗೆಗಿನ ಭಯ ಹೋಗಲಾಡಿಸಲು ಶಿಕ್ಷಕರು ನೆರವಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ.ಮಂಜಣ್ಣ ಮಾತನಾಡಿ, ಸೋಮವಾರದಿಂದ ಆರಂಭವಾಗುವ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಕಾರ್ಯ ಯಶಸ್ವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಯಜಮಾನ್, ಲಿಂಗರಾಜ್, ಶಿಕ್ಷಕರ ಸಂಘದ ನಿರ್ದೇಶಕರಾದ ಸಿ.ಬಿ.ಉಮೇಶ್, ಸಿ.ಬಿ.ಮಂಜುನಾಥ್, ಪಿ.ಎಂ.ವಿಶ್ವನಾಥ್, ಶಿಕ್ಷಣ ಸಂಯೋಜಕ ಈರಸ್ವಾಮಿ, ಮುಖ್ಯಶಿಕ್ಷಕರಾದ ಎಚ್.ಗಂಗಣ್ಣ, ಬಿ.ಎಚ್.ತಿಪ್ಪೇರುದ್ರಪ್ಪ ಇದ್ದರು.