ಇಮ್ರಾನ್​ ಖಾನ್​ರ ಹೊಸ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೊಸ ಕಾರ್ಯತ್ರಂತ್ರ ರೂಪಿಸಲಿ

ನವದೆಹಲಿ: ಇಮ್ರಾನ್​ ಖಾನ್​ ನೇತೃತ್ವದ ಹೊಸ ಪಾಕಿಸ್ತಾನವು ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಹೊಸ ಕಾರ್ಯತಂತ್ರಗಳೊಂದಿಗೆ ನಡೆದುಕೊಳ್ಳಲಿ ಎಂದು ಭಾರತ ಒತ್ತಾಯಿಸಿದೆ.

ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್​ ಕುಮಾರ್​, ” ಪಾಕಿಸ್ತಾನ ತನ್ನನ್ನು ಹೊಸ ಪಾಕಿಸ್ತಾನ, ಹೊಸ ರೀತಿಯ ಕಾರ್ಯತಂತ್ರಗಳ ಅಡಿಯಲ್ಲಿ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಹಾಗಿದ್ದರೆ, ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಅದು ಹೊಸ ರೀತಿಯಲ್ಲಿ ನಡೆದುಕೊಳ್ಳಲಿ,” ಎಂದು ಅವರು ಒತ್ತಾಯಿಸಿದರು.


“ಪುಲ್ವಾಮಾ ದಾಳಿಯನ್ನು ತಾನೇ ನಡೆಸಿರುವುದಾಗಿ ಜೈಷ್​ ಎ ಮೊಹಮದ್​ ಸಂಘಟನೆ ಘೋಷಣೆ ಮಾಡಿಕೊಂಡಿದೆ. ಆದರೂ, ಆ ಸಂಘಟನೆಯೇ ದಾಳಿ ಮಾಡಿದೆ ಎಂಬುದನ್ನು ಪಾಕಿಸ್ತಾನ ಒಪ್ಪಲು ಸಿದ್ಧವಿಲ್ಲದಿರುವುದು ಅತ್ಯಂತ ಬೇಸರದ ಸಂಗತಿ. ಜೈಷ್​ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ವಾದಿಸುತ್ತಾರೆ. ಹಾಗಾಗಿ ಜೈಷ್​ ಎ ಮೊಹಮದ್​ನಂಥ ಉಗ್ರ ಸಂಘಟನೆಯನ್ನು ಪಾಕಿಸ್ತಾನ ಸಮರ್ಥಿಸಿಕೊಳ್ಳುತ್ತಿದೆಯೇ ಎಂಬ ಗೊಂದಲವಿದೆ,” ಎಂದು ಅವರು ಪಾಕಿಸ್ತಾನದ ದ್ವಂದ್ವ ನಡೆಯನ್ನು ಟೀಕಿಸಿದರು.

“ಪಾಕಿಸ್ತಾನದ ನೆಲದಲ್ಲಿ ಜೈಷ್​ನ ಉಗ್ರ ಸಂಘಟನೆಯ ತರಬೇತಿ ಶಿಬಿರಗಳಿವೆ ಎಂಬುದು ಮತ್ತು ಆ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಪಾಕಿಸ್ತಾನದಲ್ಲಿದ್ದಾನೆ ಎಂಬುದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲ ಸದಸ್ಯರಿಗೂ ಗೊತ್ತಿರುವ ಸತ್ಯ. ಮಸೂದ್​ ಅಜರ್​ನನ್ನು ಉಗ್ರಗಾಮಿಗಳ ಪಟ್ಟಿಗೆ ಸೇರಿಸಲು ಭದ್ರತಾ ಮಂಡಳಿಯ ಎಲ್ಲ ಸದಸ್ಯರನ್ನೂ ನಾವು ಒತ್ತಾಯಿಸಿದ್ದೇವೆ,” ಎಂದು ರವೀಶ್​ ಹೇಳಿದ್ದಾರೆ.


ಭಾರತದ ವಿರುದ್ಧ ಪಾಕಿಸ್ತಾನವು ಅಮೆರಿಕ ನಿರ್ಮಿತ ಎಫ್​-16 ಬಳಸಿರುವ ಕುರಿತು ಪ್ರತಿಕ್ರಿಯೆ ನೀಡಿದ ರವೀಶ್, ” ಪಾಕಿಸ್ತಾನ ನಮ್ಮ ವಿರುದ್ಧ ಎಫ್​-16 ನಿಯೋಜಿಸಿದ ಬಗ್ಗೆ ಎಲೆಕ್ಟ್ರಾನಿಕ್​ ಸಾಕ್ಷ್ಯಗಳಿವೆ. ಪ್ರತ್ಯಕ್ಷದರ್ಶಿಗಳಿದ್ದಾರೆ. ಈ ಕೃತ್ಯವನ್ನು ಎಫ್​-16 ಖರೀದಿ ಒಪ್ಪಂದದ ಅನ್ವಯವೇ ಪಾಕಿಸ್ತಾನ ಮಾಡಿದೆಯೇ ಎಂಬುದನ್ನು ಪರಿಶೀಲಿಸಲು ನಾವು ಅಮೆರಿಕವನ್ನು ಕೇಳಿದ್ದೇವೆ,” ಎಂದು ಅವರು ಹೇಳಿದರು.