ನಕ್ಸಲ್ ಭೇಟಿ ನೀಡಿದ ವದಂತಿ; ಕಳಸ ವ್ಯಾಪ್ತಿಯಲ್ಲಿ ಕೂಂಬಿಂಗ್

ಕಳಸ: ಕಳಸ ಹೋಬಳಿ ವ್ಯಾಪ್ತಿಯ ಗುಳ್ಯಾ ಗ್ರಾಮದ ಮನೆಯೊಂದಕ್ಕೆ ನಕ್ಸಲರು ಭೇಟಿ ನೀಡಿದ್ದಾರೆಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಸೇರಿ ಕಳಸ ಭಾಗದಲ್ಲಿ ಎಎನ್​ಎಫ್ ತಂಡ ಕೂಂಬಿಂಗ್ ನಡೆಸಿದೆ.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಗುಳ್ಯಾ ಗ್ರಾಮದ ವಾಸುದೇವ್ ಎಂಬುವರು ತಮ್ಮ ಮನೆಗೆ ಇಬ್ಬರು ನಕ್ಸಲರು ಭೇಟಿ ನೀಡಿದ್ದರೆಂದು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಾಸುದೇವ್ ಮನೆಗೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸಿದೆ.

ವಾಸುದೇವ್ ನೀಡಿರುವ ಹೇಳಿಕೆ ಆಧಾರದ ಮೇಲೆ ಕುದುರೆಮುಖ ಪೊಲೀಸರು ಕಳೆದ ಮಂಗಳವಾರವೇ ಎಫ್​ಐಆರ್ ದಾಖಲಿಸಿದ್ದಾರೆ. ಎಫ್​ಐಆರ್ ದಾಖಲಾದ ಬೆನ್ನಲ್ಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆಲ ನಿರ್ದಿಷ್ಟ ಪ್ರದೇಶಗಳು ಸೇರಿದಂತೆ ಗುಳ್ಯಾ ಗ್ರಾಮದ ಕೆಲವೆಡೆ ಎಎನ್​ಎಫ್ ಸಿಬ್ಬಂದಿ ಶುಕ್ರವಾರ ಕೂಂಬಿಂಗ್ ನಡೆಸಿದ್ದಾರೆ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಎಎನ್​ಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಎಫ್​ಐಆರ್ ದಾಖಲು: ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರು ಭೇಟಿ ನೀಡಿದ್ದಾರೆಂಬ ವದಂತಿ ಇದೆ. ವಾಸುದೇವ್ ನೀಡಿದ ಹೇಳಿಕೆ ಆಧಾರದಲ್ಲಿ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಮಲೆನಾಡು ವ್ಯಾಪ್ತಿಯಲ್ಲಿ ಕೂಂಬಿಂಗ್ ಸಾಮಾನ್ಯ ಸಂಗತಿ. ಶುಕ್ರವಾರವೂ ಕುದುರೆಮುಖ ವ್ಯಾಪ್ತಿಯಲ್ಲಿ ಕೂಂಬಿಂಗ್ ಆರಂಭಿಸಲಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಲಿಸಿದ್ದಾರೆ.