Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಷರೀಫ್ ಅಲ್ಲ ಈ ನವಾಜ್!

Sunday, 08.07.2018, 3:04 AM       No Comments

|ಜ ರವೀಂದ್ರ ಎಸ್.ದೇಶಮುಖ್

ಸ್ವಯಂಕೃತ ಅಪರಾಧಗಳಿಂದ ನಲುಗಿ ಹೋಗಿರುವ ಪಾಕಿಸ್ತಾನದ ರಾಜಕೀಯದಲ್ಲಿ ಬರೀ ಕರಾಳ ಅಧ್ಯಾಯಗಳೇ ಢಾಳಾಗಿ ಕಾಣುತ್ತವೆ. ಭ್ರಷ್ಟಾಚಾರಕ್ಕೂ ಅಲ್ಲಿನ ರಾಜಕೀಯಕ್ಕೂ ಬಿಡಿಸಲಾರದ ನಂಟು. ‘ಪ್ರಜಾಪ್ರಭುತ್ವ’ದ ಮಂತ್ರ ಜಪಿಸುತ್ತ ರಾಜಕೀಯಕ್ಕೆ ಬಂದ ನವಾಜ್ ಷರೀಫ್ ಅಧಿಕಾರದ ಛತ್ರಛಾಯೆಯಡಿ ಪೋಷಿಸಿ, ಬೆಳೆಸಿದ್ದು ತಮ್ಮ ಉದ್ಯಮವಲಯವನ್ನು! ಉದ್ಯಮ ವಿಸ್ತರಿಸಿ, ಕುಟುಂಬದ ಸದಸ್ಯರಿಗೆ ರಾಜಕೀಯದ ಆಯಕಟ್ಟಿನ ಹುದ್ದೆಗಳನ್ನು ಕೊಡಿಸಿದ ಮೇಲೆ ಆಸ್ತಿಸಾಮ್ರಾಜ್ಯವನ್ನು ಪಾಕಿಸ್ತಾನದ ಗಡಿ ದಾಟಿ ವಿದೇಶಗಳಿಗೂ ಕೊಂಡೊಯ್ದರು. ಐಷಾರಾಮಿ ಬದುಕಿಗೆ ಸೌದಿ ಅರೇಬಿಯಾ, ಲಂಡನ್ ಸೇರಿದಂತೆ ವಿವಿಧೆಡೆ ಆಸ್ತಿ ಖರೀದಿಸಿದ ನವಾಜ್ ಕಾಳಧನವನ್ನು ಬಿಳಿಯಾಗಿಸಿಕೊಂಡ ಬಗೆಗೆ ಮನಸ್ಸಲ್ಲೇ ಖುಷಿಪಡುತ್ತಿದ್ದರು. ‘ಉಪು್ಪ ತಿಂದವನು ನೀರು ಕುಡಿಯಲೇ ಬೇಕು’ ಎಂಬ ಮಾತಿನಂತೆ ಮಾಡಿದ ತಪು್ಪಗಳು, ಭ್ರಷ್ಟಾಚಾರದ ಕಳಂಕ ಈಗ ಷರೀಫ್ ರಾಜಕೀಯ ಭವಿಷ್ಯವನ್ನೇ ಆಪೋಶನ ತೆಗೆದುಕೊಂಡಿದ್ದು, ಮೂರು ಬಾರಿ ಪ್ರಧಾನಿಯಾಗಿದ್ದ ವ್ಯಕ್ತಿಗೆ 10 ವರ್ಷಗಳ ಶಿಕ್ಷೆ ಜತೆಗೆ 73 ಕೋಟಿ ರೂ. ದಂಡವನ್ನು ನ್ಯಾಯಾಲಯ ಘೋಷಿಸಿಯಾಗಿದೆ. ಇನ್ನೆರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಬೆನಜೀರ್ ಭುಟ್ಟೋಗೂ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಘೋಷಿಸಿತ್ತು. ಆದರೆ, ಲಂಡನ್​ಗೆ ಸ್ಥಳಾಂತರಗೊಳ್ಳುವ ಮೂಲಕ ಅವರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಪ್ರಸಕ್ತ ಲಂಡನ್​ನಲ್ಲೇ ನೆಲೆಸಿರುವ ಷರೀಫ್ ಇದೇ ತಂತ್ರ ಅನುಸರಿಸಲಿದ್ದಾರೆಯೇ ಎಂಬುದು ಕುತೂಹಲಕರ. ಸದ್ಯದ ಸ್ಥಿತಿಯಲ್ಲಿ ನಾಲ್ಕು ಕಡೆಗಳಿಂದಲೂ ಷರೀಫ್​ರನ್ನು ಸಂಕಷ್ಟಗಳು ಆವರಿಸಿಕೊಂಡಿವೆ. ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿರುವ ಪತ್ನಿ ಮರಣಶಯ್ಯೆಯಲ್ಲಿದ್ದರೆ, ಇತ್ತ ಚುನಾವಣೆಗೆ ಸ್ಪರ್ಧಿಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಅವೆನಿಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಘೋಷಣೆಯಾಗಿದ್ದು, ಪಾಕ್​ಗೆ ಬಂದರೂ, ಬರದಿದ್ದರೂ ಆಪತ್ತು ತಪ್ಪಿದ್ದಲ್ಲ. ಅಲ್ಲದೆ, ಮಗಳು ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಕುಟುಂಬ ಸದಸ್ಯರನ್ನು ರಾಜಕೀಯದ ಮುನ್ನೆಲೆಗೆ ತರುವ ಷರೀಫ್ ಮಹತ್ವಾಕಾಂಕ್ಷೆಗೆ ಭಾರಿ ಹೊಡೆತ ಬಿದ್ದಿದೆ.

ವಿಶ್ವದ ಹಲವು ರಾಷ್ಟ್ರಗಳ ಪ್ರಭಾವಿ ನಾಯಕರು, ಮುಖ್ಯಸ್ಥರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಗದ್ದುಗೆಯನ್ನೇ ಕಳೆದುಕೊಂಡಿರುವ, ಜೈಲುಪಾಲಾಗಿರುವ ನಿದರ್ಶನಗಳು ಸಾಕಷ್ಟಿವೆ. ಆದರೂ, ಇದರಿಂದ ರಾಜಕೀಯ ನಾಯಕರು ಪಾಠ ಕಲಿಯುತ್ತಿಲ್ಲ, ಮೌಲ್ಯಯುತ ರಾಜನೀತಿಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬುದು ದುರ್ದೈವದ ಸಂಗತಿ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜೂಮಾ, ಮಲೇಷ್ಯಾ ಮಾಜಿ ಪ್ರಧಾನಿ ನಜಿಬ್ ರಜ್ಜಾಕ್, ಪೆರುವಿನ ಅಧ್ಯಕ್ಷರಾಗಿದ್ದ ಅಲ್ಬಟೋ ಹೀಗೆ ಹಲವು ನಾಯಕರು ಭ್ರಷ್ಟಾಚಾರ ಪ್ರಕರಣಗಳಿಂದಾಗಿಯೇ ಅಧಿಕಾರ ಕಳೆದುಕೊಂಡರು, ಜೈಲು ಸೇರಿದರು.

ಷರೀಫ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದದ್ದು ಇದೇ ಮೊದಲೇನಲ್ಲ. 1990ರಲ್ಲಿ ಪ್ರಧಾನಿಯಾಗಿದ್ದ ನವಾಜ್ 1993ರಲ್ಲಿ ಭ್ರಷ್ಟಾಚಾರದ ಆರೋಪಗಳಿಂದಲೇ ಪದಚ್ಯುತಗೊಂಡಿದ್ದರು. 1999ರಲ್ಲಿ ಭಾರತದ ಬೆನ್ನಿಗೆ ಚೂರಿ ಇರಿದ ನವಾಜ್ ಕಾರ್ಗಿಲ್ ಯುದ್ಧಕ್ಕೆ ಕಾರಣರಾದರು. ನಂತರದಲ್ಲಿ, ಆಗಿನ ಸೇನಾ ಮುಖ್ಯಸ್ಥ ಪರ್ವೆಜ್ ಮುಷರಫ್ ನಡೆಸಿದ ಕ್ಷಿಪ್ರ ಸೇನಾಕ್ರಾಂತಿ ಪರಿಣಾಮ ನವಾಜ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು ಅಲ್ಲದೆ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಕೂಡ ವಿಧಿಸಿತ್ತು. ಬಳಿಕ ಅಮೆರಿಕ ಮತ್ತು ಸೌದಿ ಅರೇಬಿಯಾದ ಒತ್ತಡಕ್ಕೆ ಮಣಿದ ಮುಷರಫ್ ನವಾಜ್​ರನ್ನು ಬಿಡುಗಡೆ ಮಾಡಬೇಕಾಗಿ ಬಂತು. ಆದರೆ, ಕುಟುಂಬದ 40 ಜನ ಸದಸ್ಯರೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿ ನೆಲೆಸಬೇಕಾಯಿತು. ಏಳು ವರ್ಷ ಸೌದಿಯಿಂದಲೇ ಪಾಕ್​ನ ರಾಜಕೀಯ ಸಮೀಕರಣಗಳನ್ನು ರೂಪಿಸುತ್ತಿದ್ದ ನವಾಜ್ ಸೇನೆಯೊಂದಿಗೆ ‘ಬಾಂಧವ್ಯ’ದ ನಾಟಕವಾಡಿ 2007ರಲ್ಲಿ ಪಾಕ್​ಗೆ ಮರಳುವಲ್ಲಿ ಯಶಸ್ವಿಯಾದರು.

2008ರ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು ಶತಾಯಗತಾಯ ಯತ್ನಿಸಿದರು. ಅಲ್ಲಿನ ಮಾಧ್ಯಮಗಳು ಹೇಳುವಂತೆ, ಹಣದ ಹೊಳೆಯನ್ನೇ ಹರಿಸಿದರು. ಬೆನಜೀರ್ ಭುಟ್ಟೋ ತಾಲಿಬಾನಿಗಳ ಗುಂಡಿಗೆ ಬಲಿಯಾದ ಪರಿಣಾಮ ಅನುಕಂಪದ ಅಲೆಯ ಲಾಭ ಪಡೆದ ಪಿಪಿಪಿ ಅಧಿಕಾರಕ್ಕೇರಿತು. ರಾಜಕೀಯದುದ್ದಕ್ಕೂ ಬೆನಜೀರ್ ಮತ್ತು ಅವರ ಪಕ್ಷವನ್ನು ನಖಶಿಖಾಂತ ದ್ವೇಷಿಸಿಕೊಂಡೇ ಬಂದಿದ್ದ ನವಾಜ್ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ತಾವು ಮತ್ತೆ ಜೈಲುಪಾಲಾಗಬಾರದು ಎಂಬ ಕಾರಣಕ್ಕೆ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಈ ನಡುವೆ ಪಾಕ್ ಮತ್ತೆ ಸೇನಾಡಳಿತದ ಕೈಗೆ ಹೋಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಇದನ್ನು ಗ್ರಹಿಸಿದ ಷರೀಫ್ ‘ಪಾಕಿಸ್ತಾನದಲ್ಲಿ ಪ್ರಜಾತಂತ್ರ ಸ್ಥಾಪನೆಗೆ ಬದ್ಧ’ ಎಂದು ಗಟ್ಟಿದನಿಯಲ್ಲಿ ಹೇಳುವ ಮೂಲಕ 2013ರಲ್ಲಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಆ ಮುಖೇನ ಮೂರನೇ ಬಾರಿ ಪ್ರಧಾನಿ ಹುದ್ದೆ ಏರಿದರು.

2015ರಲ್ಲಿ ಪನಾಮಾ ಪೇಪರ್ಸ್ ಲೀಕ್ ಆದಾಗ ಷರೀಫ್ ಪಾಲಿಗೆ ಹೊಸ ಸಂಕಷ್ಟ ಹುಟ್ಟಿಕೊಂಡಿತು. ಬ್ರಿಟನ್ನಿನ ಅವೆನಿಫೀಲ್ಡ್ ಫ್ಲ್ಯಾಟ್​ಗಳು ಬೇನಾಮಿ ಕಂಪನಿಗಳ ಹೆಸರಿನಲ್ಲಿದೆ. 2008ರಲ್ಲಿ ಷರೀಫ್ ಪುತ್ರಿ ಮರಿಯಂ, ಪುತ್ರ ಹುಸೇನ್ ಬೇನಾಮಿ ಕಂಪನಿಗಳ ಫ್ಲ್ಯಾಟ್​ಗಳನ್ನು ಬಳಸಿದ್ದಾರೆ ಎಂಬ ಗುರುತರ ಆರೋಪಗಳ ಬೆನ್ನಲ್ಲೇ 2017ರ ಜುಲೈನಲ್ಲಿ ಪಾಕ್ ಸುಪ್ರೀಂಕೋರ್ಟ್ ತೀರ್ಪು ನೀಡಿ ‘ನವಾಜ್ ಷರೀಫ್ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ’ ಎಂದಿತು. ಆಗ ಪ್ರಧಾನಿ ಹುದ್ದೆ ತ್ಯಜಿಸಿದರೂ, ತಮ್ಮ ಪಕ್ಷ-ಸರ್ಕಾರದ ಮೇಲೆ ನಿಯಂತ್ರಣ ಹೊಂದಿ ಪ್ರಭಾವ ಬೀರಲು ಯತ್ನಿಸಿದರು. ಆದರೆ, ಷರೀಫ್ ಮತ್ತವರ ಕುಟುಂಬದ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ-ಎನ್​ಎಬಿ ಕೋರ್ಟ್​ಗೆ ವರ್ಗಾಯಿಸಿದ ಪರಿಣಾಮ ಯಾವುದೇ ರಾಜಕೀಯ ಚಮತ್ಕಾರಗಳು ಘಟಿಸಲಿಲ್ಲ.

ಇದೇ ಜುಲೈ 25ಕ್ಕೆ ಪಾಕ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಬೆಳವಣಿಗೆಗಳು ವಿರೋಧ ಪಕ್ಷಗಳಿಗೆ ಬಲ ತಂದುಕೊಟ್ಟಿವೆ. ಮಗಳ ಮೂಲಕವಾದರೂ ಪಕ್ಷದ ಅಧಿಪತ್ಯ ಉಳಿಸಿಕೊಳ್ಳಬೇಕೆಂಬ ಷರೀಫ್​ರಿಗೆ ನಿರಾಸೆಯಾಗಿದೆ. ಇವರ ಪಾಕಿಸ್ತಾನ ಮುಸ್ಲಿಂ ಲೀಗ್(ಪಿಎಮ್​ಲ್) ಪಕ್ಷ ಈ ಚುನಾವಣೆಯನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲಗಳ ಜತೆಗೆ 68 ವರ್ಷದ ಷರೀಫ್ ಜೈಲುಪಾಲಾದರೆ ಜೀವನದ ಕೊನೇ ದಿನಗಳನ್ನು ಕಾರಾಗೃಹದಲ್ಲೇ ಕಳೆಯಬೇಕಾಗುತ್ತದೆ ಎಂಬ ಸನ್ನಿವೇಶವೂ ಸೃಷ್ಟಿಯಾಗಿದೆ.

ತಂದೆ ಕಟ್ಟಿದ್ದ ಉದ್ಯಮವನ್ನು ಉಳಿಸಿಕೊಳ್ಳಲು, ಅದನ್ನು ಮತ್ತಷ್ಟು ವಿಸ್ತರಿಸಲು ರಾಜಕೀಯ ಪ್ರವೇಶ ಮಾಡಿದ್ದ ನವಾಜ್ ಅರಬ್ ರಾಷ್ಟ್ರಗಳಲ್ಲಿ ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ ಉಕ್ಕಿನ ಉದ್ಯಮವನ್ನು ಮರುಸ್ಥಾಪಿಸಿದರು. ಪಂಜಾಬ್ ಪ್ರಾಂತ್ಯದ ಹಣಕಾಸು ಸಚಿವರಾಗಿ, ಆ ಬಳಿಕ ಅಲ್ಲಿನ ಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದರು.

ಮೂರು ಬಾರಿ ಪ್ರಧಾನಿ ಹುದ್ದೆ ಏರಿದ ವ್ಯಕ್ತಿ ಭ್ರಷ್ಟಾಚಾರದಲ್ಲಿ ತೊಡಗಿ ಈಗ ರಾಜಕೀಯ ಶೂನ್ಯದಂತಾಗಿರುವುದು ರಾಜನೀತಿಯ ದೊಡ್ಡ ಪಾಠವೇ ಸರಿ!

Leave a Reply

Your email address will not be published. Required fields are marked *

Back To Top