ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು

ಚಂಡೀಗಢ: ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಸಚಿವ ನವಜೋತ್​ ಸಿಂಗ್​ ಸಿಧುಗೆ ಪಂಜಾಬ್​ ಸರ್ಕಾರ ಝಡ್​ + ಭದ್ರತೆ ನೀಡಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಬುಲೆಟ್​ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು ನೀಡಿದ್ದಾರೆ.

ಅಮರಿಂದರ್​ ಸಿಂಗ್​ ಅವರು ತಾವು ಬಳಸುತ್ತಿದ್ದ ಬುಲೆಟ್​ ಪ್ರೂಫ್​ ಕಾರನ್ನು ಸಿಧುಗೆ ನೀಡಿದ್ದಾರೆ. ಜತೆಗೆ ರಾಜ್ಯ ಗೃಹ ಇಲಾಖೆ ಝಡ್​+ ಭದ್ರತೆ ನೀಡಲು ತೀರ್ಮಾನಿಸಿದೆ. ಜತೆಗೆ ರಾಜ್ಯ ಗೃಹ ಕಾರ್ಯದರ್ಶಿ ಎನ್​ಎಸ್​ ಕಲ್ಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸಿಧು ಭದ್ರತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರನ್ನು ನಿಯೋಜಿಸುವಂತೆ ಕೋರಿದ್ದಾರೆ.

ನವಜೋತ್​ ಸಿಂಗ್​ ಸಿಧು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಪದಗ್ರಹಣ ಸಮಾರಂಭಕ್ಕೆ ತೆರಳಿದ ನಂತರ ಹಾಗೂ ಅವರು ಡೇರಾ ಸಚ್ಛಾ ಸೌದಾ ಮುಖ್ಯಸ್ಥರ ವಿರುದ್ಧ ಮಾತನಾಡಿದ ನಂತರ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಜತೆಗೆ ಉತ್ತರ ಪ್ರದೇಶದ ಸಂಘಟನೆಯೊಂದು ಸಿಧು ಅವರನ್ನು ಹತ್ಯೆ ಮಾಡಿದವರಿಗೆ 1 ಕೋಟಿ ರೂ. ನೀಡುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಹೆಚ್ಚಿಸಬೇಕಿದೆ ಎಂದು ಕಲ್ಸಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)