ಅಮೆರಿಕದ ಸಿನ್ಸಿನಾಟಿಯಲ್ಲಿ ಆ.30 ರಿಂದ ನಾವಿಕ ಸಮ್ಮೇಳನ, 3 ಸಾವಿರ ಕನ್ನಡಿಗರ ನಿರೀಕ್ಷೆ

ಬೆಂಗಳೂರು: ಅಮೆರಿಕದ ಓಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಆಗಸ್ಟ್ 30 ರಿಂದ 3ದಿನ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ನಾವಿಕ ಸಂಸ್ಥೆ ಹಮ್ಮಿಕೊಂಡಿದೆ.

ಕನ್ನಡದ ಸೊಗಡನ್ನು ಈ ಉತ್ಸವದಲ್ಲಿ ಬಿಂಬಿಸಲಾಗುವುದು. ಕನ್ನಡದ ನಾಟಕಗಳು, ಕವಿಗೋಷ್ಠಿಗಳು, ಕನ್ನಡ ಗೀತಗಾಯನ, ಸಂಗೀತ ಸಂಜೆ, ಸ್ವಾತಂತ್ರ್ಯದ ಬಗ್ಗೆ ಗೋಷ್ಠಿಗಳು, ಯುವ ಸಮೂಹಕ್ಕೆ ಮಾರ್ಗದರ್ಶನ, ಸ್ವಂತ ಉದ್ಯಮವನ್ನು ಪ್ರಾರಂಭಿಸಲಿಚ್ಛಿಸುವವರಿಗೆ ಮಾರ್ಗದರ್ಶನ ಮತ್ತು ಸಹಾಯ, ಸಮಾಜಮುಖಿ ಕೆಲಸಗಳ ಅನುಷ್ಠಾನ ಹೀಗೆ ಹತ್ತು ಹಲವು ಚಟುವಟಿಕೆಗಳಿಗೆ ಈ ಸಮ್ಮೇಳನದಲ್ಲಿ ಒತ್ತುಕೊಡಲಾಗುವುದು ಎಂದು ಕಾರ್ಯಕ್ರಮ ಅಧ್ಯಕ್ಷ ಡಾ.ಮನಮೋಹನ್ ಕಟಪಾಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಚಿತ್ರ ನಟ ಗಣೇಶ್ ದಂಪತಿ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣ, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ನಿರುಪಮಾ, ಹಾಸ್ಯ ಭಾಷಣಕಾರರಾದ ಪ್ರೊ.ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಹಿರಿಯ ವಾಗ್ಮಿ ಪ್ರೊ. ಕೆ.ಪಿ. ಪುತ್ತ್ತೂರಾಯ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪಾಲ್ಗೊಳ್ಳಲಿದ್ದಾರೆ ಎಂದರು.

ಕನ್ನಡ ಕೆಲಸವನ್ನು ದೂರದ ಊರಿನಲ್ಲಿ ಸಂರಕ್ಷಿಸುವ ಮತ್ತು ಮುಂದಿನ ಪೀಳಿಗೆಯವರಿಗೆ ಕನ್ನಡದ ಸೊಗಡನ್ನು ಪರಿಚಯಿಸುವ ಮತ್ತು ಕನ್ನಡವನ್ನು ಅನಿವಾಸಿಗಳ ಮನದಾಳಗಳಲ್ಲಿ ಶಾಶ್ವತವಾಗಿ ಉಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಭಾರತೀಯ ತಂಡದ ನಿರ್ದೇಶಕರಾದ ಶ್ರೀನಾಥ್ ವಸಿಷ್ಠ, ಅಶ್ವಿನಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

3 ಸಾವಿರ ಕನ್ನಡಿಗರು ಭಾಗಿ ನಿರೀಕ್ಷೆ

ಅಮೆರಿಕದ ಓಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಆಗಸ್ಟ್ 30 ರಿಂದ ಮೂರು ದಿನ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಅಂದಾಜು ಮೂರು ಸಾವಿರ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ.