ಚಾರ್ಲಿ ಚಾಪ್ಲಿನ್ ಆಗಲು ನವೀನ್ ಸಜ್ಜು

ಬೆಂಗಳೂರು: ಈ ವರ್ಷದ ಯಶಸ್ವಿ ಸಿನಿಮಾಗಳಲ್ಲಿ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕೂಡ ಒಂದು. ಅದಕ್ಕೆ ನಿರ್ದೇಶನ ಮಾಡಿದವರು ಕುಮಾರ್. ಇದೀಗ ಅವರು ತಮ್ಮ ನಿರ್ದೇಶನದ ಎರಡನೇ ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಚಿತ್ರಕ್ಕೆ ‘ಚಾರ್ಲಿ ಚಾಪ್ಲಿನ್’ ಎಂದು ಶೀರ್ಷಿಕೆ ಫೈನಲ್ ಮಾಡಲಾಗಿದೆ. ಅಂದಹಾಗೆ, ಈ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದಿದ್ದಾರೆ ಗಾಯಕ ನವೀನ್ ಸಜ್ಜು. ‘ಲೂಸಿಯಾ’ ಚಿತ್ರದ ಮೂಲಕ ಗಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವೀನ್, ‘ಕನಕ’ ಚಿತ್ರದಿಂದ ಸಂಗೀತ ನಿರ್ದೇಶಕರಾದರು. ‘ಬಿಗ್​ಬಾಸ್’ ರಿಯಾಲಿಟಿ ಶೋನಲ್ಲಿ ರನ್ನರ್ ಆಪ್ ಆಗಿಯೂ ಹೆಸರು ಮಾಡಿದರು. ಇದೀಗ ಅವರು ಬೆಳ್ಳಿತೆರೆಯ ಮೇಲೆ ಹೀರೋ ಆಗಿ ಮಿಂಚುವುದಕ್ಕೆ ತಯಾರಿ ನಡೆಸಿದ್ದಾರೆ. ‘ಚಾರ್ಲಿ ಚಾಪ್ಲಿನ್’ ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಆರಂಭದಿಂದ ಅಂತ್ಯದವರೆಗೂ ಬರೀ ನಗು ತುಂಬಿರಲಿದೆಯಂತೆ. ‘ನನ್ನ ಹಿಂದಿನ ಸಿನಿಮಾದಲ್ಲಿ ಹಾಸ್ಯವೇ ಪ್ರಧಾನವಾಗಿತ್ತು. ಇಲ್ಲಿಯೂ ಅದನ್ನೇ ಮುಂದುವರಿಸಿದ್ದೇವೆ. ನವೀನ್​ಗೆ ಮೊದಲಿನಿಂದಲೂ ನಟನೆ ಮೇಲೆ ಕ್ರೇಜ್ ಇತ್ತು. ಅಲ್ಲದೆ, ಬಿಗ್​ಬಾಸ್​ನಲ್ಲಿದ್ದಾಗ ಅವರ ಕೆಲವೊಂದು ಹಾವಭಾವಗಳು ನನ್ನ ಗಮನಸೆಳೆದಿದ್ದವು. ಆ ಕಾರಣಕ್ಕಾಗಿಯೇ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅವರ ಜತೆಗೆ ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಇಡೀ ಸಿನಿಮಾದಲ್ಲಿ ಒಂದು ಜರ್ನಿ ಇರಲಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಕುಮಾರ್.

ಈ ಚಿತ್ರದಲ್ಲಿ ನವೀನ್​ಗೆ ನೈಜತೆಗೆ ಹತ್ತಿರವಾದ ಪಾತ್ರವಿರಲಿದೆಯಂತೆ. ‘ನಮ್ಮ ‘..ಕರಿಯಪ್ಪ’ ಸಿನಿಮಾದಲ್ಲಿ ‘ಊರ್ವಶಿ ಅವಳು..’ ಎಂಬ ಗೀತೆಯನ್ನು ನವೀನ್ ಹಾಡಿದ್ದರು. ಅದು ತುಂಬ ಹಿಟ್ ಆಗಿತ್ತು. ಒಮ್ಮೆ ನಾನು ಮತ್ತು ಅವರು ಮಾತನಾಡುವಾಗ, ‘ಚಾರ್ಲಿ ಚಾಪ್ಲಿನ್’ ಕಥೆ ಚರ್ಚೆಗೆ ಬಂತು. ಅಲ್ಲಿಂದಲೇ ಸಿನಿಮಾ ಮಾಡುವ ತಯಾರಿ ಶುರು ಮಾಡಿದೆವು. ಜೂನ್ ಅಥವಾ ಜುಲೈನಲ್ಲಿ ಶೂಟಿಂಗ್ ಶುರುವಾಗಲಿದೆ’ ಎಂದು ಪೂರಕ ಮಾಹಿತಿ ಒದಗಿಸುತ್ತಾರೆ ನಿರ್ದೇಶಕ ಕುಮಾರ್.

ಮೊದಲಿನಿಂದಲೂ ನನಗೆ ನಟನಾಗಬೇಕೆಂಬ ಹಂಬಲ ಇತ್ತು. ಅನೇಕರು ಬಂದು ಕಥೆ ಹೇಳಿದ್ದರು. ಆದರೆ, ಯಾವುದೂ ಇಷ್ಟವಾಗಿರಲಿಲ್ಲ. ಕುಮಾರ್ ಮಾಡಿಕೊಂಡಿದ್ದ ಸ್ಕ್ರಿಪ್ಟ್ ಬಹಳ ಚೆನ್ನಾಗಿತ್ತು. ಅವರ ‘…ಕರಿಯಪ್ಪ’ ಸಿನಿಮಾವನ್ನು ನೋಡಿ, ತುಂಬ ಇಷ್ಟಪಟ್ಟಿದ್ದೆ.

| ನವೀನ್ ಸಜ್ಜು ನಟ

Leave a Reply

Your email address will not be published. Required fields are marked *