ಹುಬ್ಬಳ್ಳಿ: ಇಲ್ಲಿಯ ಕುಸುಗಲ್ಲ ರಸ್ತೆ ನವೀನ ಪಾರ್ಕ್ ನಿವಾಸಿಗಳ ಸಂಘದ ವತಿಯಿಂದ ಭಾನುವಾರ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಭವಿಷ್ಯದ ನಾಗರಿಕರಾದ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಬೆಳೆಸಲು ಎನ್ ಸಿಸಿ ಹಾಗೂ ಎನ್ ಎಸ್ಸಿಯನ್ನು ಶಾಲಾ ಪಠ್ಯದಲ್ಲಿ ಕಡ್ಡಾಯಗೊಳಿಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ, ಭಾರತೀಯರಾದ ನಾವೆಲ್ಲರೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಬಗ್ಗೆ ಹೆಮ್ಮೆ ಪಡಬೇಕು. ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಇದು ಒಂದಾಗಿದೆ. ರಾಷ್ಟ್ರ ಸೇವೆಯಲ್ಲಿ ನಮ್ಮನ್ನು ಪುನರ್ ಸಮರ್ಪಿಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಭಾರತೀಯರೆಲ್ಲ ಶ್ರಮಿಸಬೇಕು ಎಂದರು.
ಉತ್ಸಾಹ, ಸಮರ್ಪಣೆ ಭಾವ, ತ್ಯಾಗ ಮತ್ತು ಎಲ್ಲ ಧರ್ಮಗಳು, ಜಾತಿಗಳು ಮತ್ತು ಪಂಥಗಳ ನಡುವೆ ಭ್ರಾತೃತ್ವ ಭಾವವನ್ನು ಮೂಡಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಎಲ್ಲರೂ ಸ್ಮರಿಸಬೇಕು ಎಂದರು.
ಸಂಘದ ಕಾರ್ಯದರ್ಶಿ ಕೆ. ರಮಣಮೂರ್ತಿ, ವೈದ್ಯನಾಥನ್, ಆಕಳವಾಡಿ, ಸುಭಾಸ, ಮಹಾಂತೇಶ, ಕೃಷ್ಣಾ, ಮುರಳಿ, ಬಾಲಕೃಷ್ಣ, ಹಾಗೂ ಇತರ ನಿವಾಸಿಗಳು ಹಾಜರಿದ್ದರು.