Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಚಂದನವನದ ತಾರಾದಶಮಿ

Thursday, 18.10.2018, 3:05 AM       No Comments

ನವರಾತ್ರಿಯ ನವದುರ್ಗೆಯರ ಪೂಜೆಯಲ್ಲಿ ಪಾಲ್ಗೊಳ್ಳುವುದೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ. ಸ್ಯಾಂಡಲ್​ವುಡ್​ನ ನಟಿಮಣಿಯರ ಪಾಲಿಗೂ ದಸರಾ ಎಂದರೆ ಹತ್ತು ಹಲವು ವಿಶೇಷತೆಗಳ ಕಣಜ. ಕೆಲವರಿಗೆ ತರಹೇವಾರಿ ಗೊಂಬೆಗಳನ್ನು ಕೂರಿಸಿ ಕಣ್ತುಂಬಿಕೊಳ್ಳುವುದು ಖುಷಿಯಾದರೆ, ಮತ್ತೆ ಕೆಲವರಿಗೆ ಬಗೆಬಗೆಯ ಅಡುಗೆ ಮಾಡಿ, ಸವಿಯುವ ಉತ್ಸಾಹ. ಇಂಥ ಅದ್ದೂರಿ ನಾಡಹಬ್ಬವನ್ನು ಚಂದನವನದ ತಾರೆಯರು ಹೇಗೆಲ್ಲ ಆಚರಿಸುತ್ತಾರೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

ಹಬ್ಬ ಇದ್ರೂ ಡಯಟ್ ಮಿಸ್ ಆಗಲ್ಲ

ವರ್ಷದಲ್ಲಿ ಬರುವ ಎಲ್ಲ ಹಬ್ಬಕ್ಕೂ ನಮ್ಮನೆಯಲ್ಲಿ ಸಮಾನ ಪ್ರಾಮುಖ್ಯತೆ. ತುಂಬ ಗ್ರಾ್ಯಂಡ್ ಆಗಿ ಆಚರಣೆ ಮಾಡುತ್ತೇವೆ. ಅದರಲ್ಲೂ ನಮ್ಮಮ್ಮ ಭರತನಾಟ್ಯ ಕಲಾವಿದೆ. 5 ವರ್ಷದಿಂದ ಹಿಡಿದು 20 ವರ್ಷದವರೆಗಿನ 20ಕ್ಕೂ ಅಧಿಕ ಮಕ್ಕಳು ನಮ್ಮ ಮನೆಗೆ ಬರುತ್ತಾರೆ. ಅವರೊಂದಿಗೆ ಹಬ್ಬ ಆಚರಿಸುವುದು ನಮ್ಮ ಪಾಲಿಗೆ ಸ್ಪೆಷಲ್. ಎಲ್ಲ ಮಕ್ಕಳಿಗೂ ಸಿಹಿ ತಿಂಡಿ ಮಾಡಿ, ಒಟ್ಟಿಗೆ ಕುಳಿತು ದಿನಕಳೆಯುತ್ತೇವೆ. ಅದರಲ್ಲೂ ಆಯುಧ ಪೂಜೆ ನನ್ನಪ್ಪನ ಡಿಪಾರ್ಟ್ ಮೆಂಟ್. ಆವತ್ತು ನಾನು ಇರಲೇಬೇಕು. ಗಾಡಿಗಳನ್ನೆಲ್ಲ ತೊಳೆಯುವುದರಿಂದ ಹಿಡಿದು ಅವುಗಳಿಗೆ ಪೂಜೆ ಮಾಡುವುದೂ ಅಪ್ಪನೇ. ಗಾಲಿಯ ಕೆಳಗೆ ನಿಂಬೆಹಣ್ಣಿಟ್ಟು ಹತ್ತಿಸುವ ಕೆಲಸ ನನ್ನದು. ಜತೆಗೆ ಗೊಂಬೆ ಕೂರಿಸುವ ಪದ್ಧತಿ ಮೊದಲಿಂದಲೂ ಇದೆ. ಮೊದಲೆಲ್ಲ ಮಣ್ಣಿನ ಬೊಂಬೆಗಳಿಗೆ ಪೂಜೆ ಮಾಡಲಾಗುತ್ತಿತ್ತು. ಇದೀಗ ಮನೆತುಂಬ ಶೋಕೆಸ್​ಗಳಲ್ಲಿ ಗೊಂಬೆಗಳೇ ಇವೆ. ಹಬ್ಬಬಂತು ಅಂತ ಸಿಕ್ಕಿದ್ದನ್ನೆಲ್ಲ ತಿನ್ನಲ್ಲ. ಡಯಟ್​ನಲ್ಲೇ ಇರುತ್ತೇನೆ.

| ಲಾಸ್ಯಾ ನಾಗರಾಜ್

ಹುಲಿ ಕುಣಿತ ಆಕರ್ಷಣೆ

ನಮ್ಮದು ಮಂಗಳೂರು ಆಗಿರುವುದರಿಂದ ಹಬ್ಬದ ಗಮ್ಮತ್ತು ತುಸು ಕಮ್ಮಿಯೇ. ಆದರೂ ನಮ್ಮ ಮನೆಯಲ್ಲಿ ಒಂಭತ್ತು ದಿನಗಳ ಕಾಲ ಹಬ್ಬದ ಆಚರಣೆ ನಡೆಯುತ್ತದೆ. ನಮ್ಮ ಕಡೆಗಳಲ್ಲಿ ಹುಲಿ ಕುಣಿತ ಫೇಮಸ್. ಈ ಹಬ್ಬದಂದು ಹತ್ತಾರು ಯುವಕರು ಹುಲಿ ವೇಷ ಹಾಕಿಕೊಂಡು ಪ್ರತಿ ಮನೆಗೆ ಭೇಟಿ ಕೊಟ್ಟು, ಕುಣಿತ ಹಾಕಿ ದಕ್ಷಿಣೆ ಪಡೆಯುತ್ತಾರೆ. ಅದೇ ರೀತಿ ಯಕ್ಷಗಾನದ ಕಲಾವಿದರೂ ಬಂದು ಪ್ರಸಂಗಗಳನ್ನು ತೋರಿಸುತ್ತಾರೆ. ಇಂದಿಗೂ ಆ ಸಂಪ್ರದಾಯ ನಡೆಯುತ್ತ ಬಂದಿದೆ. ಚಿಕ್ಕಂದಿನಲ್ಲಿ ಮಹಾನವಮಿಯ ಒಂಭತ್ತು ದಿನಗಳಲ್ಲಿ ಆಯುಧ ಪೂಜೆ ಮತ್ತು ಶಾರದಾ ಪೂಜೆ ನನಗೆ ಅಚ್ಚುಮೆಚ್ಚು. ಆಯುಧ ಪೂಜೆ ದಿನ ಸೈಕಲ್​ಗೆ ಪೂಜೆ ಮಾಡಿಸಿಕೊಂಡು ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಶಾರದಾ ಪೂಜೆ ದಿನ ನನ್ನೆಲ್ಲ ಪುಸ್ತಕಗಳಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈಗ ಸಿನಿಮಾ ಕೆಲಸ, ಶೂಟಿಂಗ್​ನಲ್ಲಿ ಬಿಜಿಯಾಗಿರುವುದರಿಂದ ಹಬ್ಬಗಳೆಲ್ಲವೂ ಮಿಸ್ ಆಗುತ್ತಿವೆ.

| ನಿಮಿಕಾ ರತ್ನಾಕರ್

ದಸರಾದಲ್ಲಿ ನೃತ್ಯ ಸಂಭ್ರಮ

ಒಬ್ಬ ನೃತ್ಯ ಕಲಾವಿದೆಯಾಗಿ ನನಗೆ ಈ ಹಬ್ಬ ನಿಜಕ್ಕೂ ವಿಶೇಷ. ಯಾಕೆಂದರೆ ಹಲವಾರು ವರ್ಷಗಳಿಂದ ನಾನು ಅಭಿನವ ನೃತ್ಯ ತಂಡದಲ್ಲಿ ತೊಡಗಿಕೊಂಡಿದ್ದೇನೆ. ಪ್ರತಿ ವರ್ಷ ಕೂಡ ನಾವು ಮೈಸೂರಿನ ದಸರಾ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡುತ್ತೇವೆ. ಕಳೆದ 8 ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಈ ಬಾರಿಯೂ ವಿಜಯ ದಶಮಿಯ ಶುಭದಿನದಂದು ಅಲ್ಲಿ ಡಾನ್ಸ್ ಮಾಡಲಿರುವುದು ನನಗೆ ಖುಷಿ ನೀಡುತ್ತದೆ. ಅದನ್ನು ಒಂದು ಕರ್ತವ್ಯದಂತೆ ಪಾಲಿಸಿಕೊಂಡು ಬರುತ್ತಿದ್ದೇನೆ. ಆ ಸಂಪ್ರದಾಯವನ್ನು ಬ್ರೇಕ್ ಮಾಡಬಾರದು ಎಂಬುದು ನಮ್ಮ ಆಶಯ. ಉಳಿದಂತೆ ಆಯುಧ ಪೂಜೆ ದಿನ ಮನೆಯ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುತ್ತೇನೆ. ಎಲ್ಲರಿಗೂ ಅಂದೇ ರಜೆ ಸಿಗುತ್ತದೆ. ವಿಶೇಷ ಅಡುಗೆ ಮಾಡಿ ಸವಿಯುತ್ತೇವೆ. ಅಮ್ಮ ಮಾಡುವ ಗಸಗಸೆ ಪಾಯಸ ನನಗೆ ಸಖತ್ ಇಷ್ಟ. ಇಷ್ಟು ವರ್ಷಗಳ ಕಾಲ ಮೈಸೂರು ದಸರಾ ಎಂಜಾಯ್ ಮಾಡಿದ್ದರೂ ಪ್ರಜ್ವಲ್ ಜತೆ ದಸರಾ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿಯೂ ನಾವು ಬಿಜಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಜತೆಯಾಗಿ ದಸರಾ ಸಂಭ್ರಮದಲ್ಲಿ ಭಾಗಿ ಆಗಬೇಕು ಎಂಬ ಆಸೆ ಇದೆ.

| ರಾಗಿಣಿ ಚಂದ್ರನ್

ಗೊಂಬೆ ಕೂರಿಸುವುದೇ ದೊಡ್ಡ ಖುಷಿ

ಮಹಾನವಮಿ ಅಂದ ತಕ್ಷಣ ನನಗೆ ಮೊದಲು ನೆನಪಿಗೆ ಬರುವುದು ಗೊಂಬೆ ಕೂರಿಸುವುದು. ನಾನು ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕೆಲ ವರ್ಷಗಳ ಕಾಲ ಇದ್ದೆ. ಅಲ್ಲಿಯೂ ವಿಜಯದಶಮಿ ದಿನ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವಿತ್ತು. ಅಮ್ಮನೊಂದಿಗೆ ಎಲ್ಲರ ಮನೆಗಳಿಗೆ ಭೇಟಿ ನೀಡಿ ಬರುತ್ತಿದ್ದೆ. ದಾಂಡಿಯಾ ನೃತ್ಯದಲ್ಲಿಯೂ ಭಾಗವಹಿಸುತ್ತಿದ್ದೆ. ನಮ್ಮ ಮನೆಯಲ್ಲಂತೂ ಸಂಭ್ರಮವೋ ಸಂಭ್ರಮ. ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದೆ. ಕಾಲೇಜು ಮುಗಿಯುತ್ತಿದ್ದಂತೆ ಎಲ್ಲವೂ ಕಡಿಮೆಯಾಗುತ್ತ ಬಂತು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ನಂತರ ಮತ್ತಷ್ಟು ಬಿಜಿಯಾದೆ. ಹಾಗಂತ ಹಬ್ಬದ ಆಚರಣೆ ನಿಲ್ಲಿಸಿಲ್ಲ. ಆಯುಧ ಪೂಜೆ, ಬನ್ನಿ ಪೂಜೆ ಒಂಭತ್ತು ದಿನಗಳ ಕಾಲ ದೇವಿಯರ ಪೂಜೆ ಕಾರ್ಯ ನಡೆಯುತ್ತಲಿರುತ್ತದೆ. ನಮ್ಮ ಮನೆಯಲ್ಲಿನ ಸಂಗೀತ ಉಪಕರಣಗಳಿಗೂ ವಿಶೇಷ ಪೂಜೆ. ಈ ಬಾರಿ ‘ಮುಗುಳುನಗೆ’ ಚಿತ್ರದಲ್ಲಿನ ಗಿಟಾರ್​ಗೂ ಪೂಜೆ ನಡೆಯಲಿದೆ. ಇದೆಲ್ಲದರ ಮುಖ್ಯ ಉಸ್ತುವಾರಿ ನನ್ನಮ್ಮ. ಊಟದ ವಿಷಯದಲ್ಲಂತೂ ನಾನು ತಿಂಡಿಪೋತಿ. ಅದರಲ್ಲೂ ಹಬ್ಬದ ಊಟವನ್ನು ಮಿಸ್ ಮಾಡಿಕೊಳ್ಳುವುದೇ ಇಲ್ಲ. ನೈವೇದ್ಯಕ್ಕಾಗಿ ಪಾಯಸ, ಒಬ್ಬಟ್ಟು, ಬಜ್ಜಿ, ನಾಲ್ಕೈದು ಥರದ ಪಲ್ಯ ಇನ್ನೂ ಹಲವು ಬಗೆಯ ಖಾದ್ಯಗಳನ್ನು ಮಾಡುತ್ತೇವೆ. ಹತ್ತಿರದ ದೇವಸ್ಥಾನಗಳಿಗೂ ಭೇಟಿ ನೀಡಿ ಬರುತ್ತೇನೆ.

|ನಿಖಿತಾ ನಾರಾಯಣ್

ಅಮ್ಮನದೇ ಉಸ್ತುವಾರಿ

ಮಹಾನವಮಿ ಅಂದಮೇಲೆ ಸಂಭ್ರಮ ಸಹಜ. ನಮ್ಮ ಮನೆಯಲ್ಲೂ ಹಬ್ಬದ ಸಡಗರ ಜೋರು. ಒಂಭತ್ತು ದಿನಗಳ ಕಾಲ ಅಮ್ಮನೇ ಹಬ್ಬಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಾರೆ. ವ್ರತಾಚರಣೆಯೂ ಅವರದ್ದೇ. ನಾವೇನಿದ್ದರೂ ಕೈ ಮುಗಿದು ನಮ್ಮ ನಮ್ಮ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ನಮ್ಮ ಮನೆಯಲ್ಲಿ ಗೊಂಬೆ ಕೂರಿಸುತ್ತಿಲ್ಲ. ಅಜ್ಜಿಯ ಕಾಲದಲ್ಲಿ ಗೊಂಬೆ ಪೂಜೆ ಮಾಡಲಾಗುತ್ತಿತ್ತು. ವಿಶೇಷ ಎಂದರೆ ಈ ಬಾರಿಯ ದಸರಾಕ್ಕೆ ನೃತ್ಯ ಪ್ರದರ್ಶನವೊಂದನ್ನು ನೀಡುತ್ತಿದ್ದೇನೆ.

| ಶ್ರಾವ್ಯ

ಟೆಡ್ಡಿ ಬೇರ್ ಮತ್ತು ಗಣಿತ ಪುಸ್ತಕ

ಗೊಂಬೆ ಕೂರಿಸಿ ಪೂಜಿಸುವುದು ನನ್ನ ಪಾಲಿಗೆ ದಸರಾ ಹಬ್ಬದ ದೊಡ್ಡ ವಿಶೇಷತೆ. ಚಿಕ್ಕ ವಯಸ್ಸಿನಿಂದಲೂ ಅದು ನನಗೆ ಅತ್ಯಾಕರ್ಷಕವಾಗಿ ಕಂಡಿದೆ. ಅಜ್ಜಿ ಮನೆಯಲ್ಲಿ ತುಂಬ ಅದ್ದೂರಿಯಾಗಿ ಹಬ್ಬ ಮಾಡುತ್ತಿದ್ದೆವು. ಅಲ್ಲಿ ಅಂದಾಜು 50-60 ವರ್ಷ ಹಳೆಯದಾದ ಗೊಂಬೆಗಳಿದ್ದವು. ಆಗ ನನಗೆ ಅದರ ಪ್ರಾಮುಖ್ಯತೆ ಗೊತ್ತಿರಲಿಲ್ಲ. ನನ್ನ ಬಳಿ ಇರುವ ಟೆಡ್ಡಿ ಬೇರ್ ಗೊಂಬೆಗಳನ್ನೂ ದೇವರ ಎದುರು ಜೋಡಿಸಿ ಇಡುತ್ತಿದ್ದೆ. ಯಾವ ಗೊಂಬೆ ಬೇಕಿದ್ದರೂ ಕೂರಿಸಬಹುದು ಎಂಬ ಮುಗ್ಧತೆ ನನ್ನದಾಗಿತ್ತು. ಗೊಂಬೆಗಳ ಜತೆಗೆ ಶಾಲೆಯ ಪುಸ್ತಕಗಳನ್ನು ಕೂಡ ತಂದು ಪೂಜೆಗೆ ಇಡುತ್ತಿದ್ದೆವು. ತಮಾಷೆ ಎಂದರೆ, ನಾನು ಗಣಿತದ ಪಠ್ಯಪುಸ್ತಕವನ್ನೇ ಎಲ್ಲಕ್ಕಿಂತ ಮೇಲೆ ಇಡುತ್ತಿದ್ದೆ. ದೇವರು ಮೊದಲು ಅದನ್ನೇ ನೋಡಲಿ, ಅದಕ್ಕೇ ಜಾಸ್ತಿ ಆಶೀರ್ವಾದ ಮಾಡಲಿ ಎಂದು ಲೆಕ್ಕಾಚಾರ ಹಾಕುತ್ತಿದ್ದೆ. ದಸರಾ ಬಂತು ಎಂದರೆ ಶಾಲೆಗೆ ಹತ್ತಾರು ದಿನ ರಜೆ ಸಿಗುತ್ತಿತ್ತು. ಆ ಕಾರಣಕ್ಕಾಗಿಯೂ ಈ ಹಬ್ಬ ನನಗೆ ಇಷ್ಟವಾಗುತ್ತಿತ್ತು. ಈ ಒಂಭತ್ತು ದಿನ ನಮಗೆ ಸಂಭ್ರಮವೋ ಸಂಭ್ರಮ. ಈಗ ಭಕ್ತಿಯಿಂದ ಆಯುಧ ಪೂಜೆ ಮಾಡುತ್ತೇವೆ. ಅದರಲ್ಲೂ ಗಾಡಿಗಳಿಗೆ ಶ್ರದ್ಧೆಯಿಂದ ಪೂಜೆ ಮಾಡುತ್ತೇವೆ. ಈವರೆಗೂ ನಾನು ಮೈಸೂರು ದಸರಾವನ್ನು ನೇರವಾಗಿ ನೋಡಿಲ್ಲ. ಅದೊಂದು ಬೇಸರವಿದೆ.

| ಮೇಘನಾ ರಾಜ್

Leave a Reply

Your email address will not be published. Required fields are marked *

Back To Top