ದುಷ್ಟರ ದಮನ ಮಾಡುವ ಚಂದ್ರಘಂಟಾದೇವಿ

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ನವರಾತ್ರಿಯ ಮೂರನೇ ದಿನ ಚಂದ್ರಘಂಟಾದೇವಿಯನ್ನು ಪೂಜಿಸಲಾಗುತ್ತದೆ. ಇವಳ ಮಸ್ತಕದಲ್ಲಿ ಘಂಟೆಯ ಆಕಾರದ ಅರ್ಧಚಂದ್ರನಿರುವನು. ಆದ್ದರಿಂದಲೇ ಇವಳನ್ನು ಚಂದ್ರಘಂಟಾದೇವಿ ಎಂದು ಕರೆಯುವುದು. ಈ ದೇವಿಯ ಶರೀರದ ಬಣ್ಣ ಚಿನ್ನದಂತೆ ಹೊಳೆಯುತ್ತದೆ ಹಾಗೂ ಸ್ವರೂಪವು ಶಾಂತಿದಾಯಕವಾಗಿದೆ. ಇವಳಿಗೆ 10 ಕೈಗಳಿವೆ. ಅದರಲ್ಲಿ ಶಸ್ತ್ರಗಳು ಹಾಗೂ ಬಾಣಗಳನ್ನು ಹಿಡಿದಿರುವಳು. 5 ಕಮೇಂದ್ರಿಯ ಹಾಗೂ 5 ಜ್ಞಾನೇಂದ್ರಿಯಗಳ ಸಂಕೇತವಾಗಿ ಈ 10 ಕೈಗಳಿವೆ. ಈಕೆ ಸಿಂಹವಾಹಿನಿಯಾಗಿ ನೆಲೆಸಿರುವಳು.

ಅವತಾರದ ಹಿನ್ನೆಲೆ: ದುಷ್ಟರ ದಮನ ಮಾಡುವುದರಲ್ಲಿ ಯಾವಾಗಲೂ ನಿರತಳಾಗಿರುವ ಈಕೆಯ ಕಣ್ಣುಗಳಲ್ಲಿ, ಇಡೀ ಶರೀರದಲ್ಲಿ ಕಾಂತಿ ವೃದ್ಧಿಯಾಗುತ್ತದೆ ಹಾಗೂ ಈಕೆಯ ಸ್ವರದಲ್ಲಿ ದಿವ್ಯಮಾಧುರ್ಯ ತುಂಬಿರುತ್ತದೆ. ಈಕೆಯನ್ನು ಉಪಾಸಿಸುವ ಭಕ್ತರು ಎಲ್ಲಿಗೆ ಹೋದರೂ, ಅಲ್ಲಿ ಅವರನ್ನು ನೋಡುವವರು ಶಾಂತಿ ಮತ್ತು ಸುಖವನ್ನು ಅನುಭವಿಸುತ್ತಾರೆ. ಈ ದೇವಿಯನ್ನು ಆರಾಧಿಸುವ ಭಕ್ತನಲ್ಲಿ ದಿವ್ಯ ಪ್ರಕಾಶಮಾನ ತೇಜಸ್ಸು ಹೊಳೆಯುತ್ತಿರುತ್ತದೆ. ಈಕೆಯ ಧ್ಯಾನ ಮಾಡುವಾಗ ಘಂಟೆಯ ಧ್ವನಿ ಕೇಳಿಸುತ್ತದೆ.

ಪೂಜಾವಿಧಿ: ನವರಾತ್ರಿಯ ಮೂರನೇ ದಿನ ಚಂದ್ರಘಂಟಾದೇವಿಗೆ ಬೂದು ಬಣ್ಣದ ಸೀರೆ ಹಾಗೂ ಅದೇ ಬಣ್ಣದ ಕುಪ್ಪಸ ಉಡಿಸಿ, ಬೂದು ಬಣ್ಣ ಅಥವಾ ಕೇಸರಿ ಬಣ್ಣದ ಹೂವುಗಳಿಂದ, ಅಕ್ಷತೆ, ಗೆಜ್ಜೆವಸ್ತ್ರಗಳಿಂದ ಪೂಜಿಸುತ್ತ ಲಲಿತಾ ಸಹಸ್ರನಾಮವನ್ನು ಹೇಳುತ್ತ ಆರಾಧಿಸಬೇಕು. ಅಂದು ಈ ದೇವಿಗೆ ಅಕ್ಕಿ ಮತ್ತು ಕಡಲೇಬೇಳೆಯಿಂದ ಮಾಡಿದ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು. ಅಂದು ದೇವಿಗೆ ಕೌಮಾರಿ ಅಲಂಕಾರ ಮಾಡಬೇಕು.

ಫಲ: ಈ ದೇವಿಯನ್ನು ಪೂಜಿಸುವುದರಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ, ವಿವಿಧ ಪ್ರಕಾರದ ದಿವ್ಯಧ್ವನಿಗಳು ಕೇಳಿಸುತ್ತವೆ. ಸಮಸ್ತ ಪಾಪಗಳು ಹಾಗೂ ಬಂಧನಗಳು ನಾಶವಾಗುತ್ತವೆ. ಪ್ರೇತಬಾಧೆ ಇದ್ದರೆ ಪರಿಹಾರವಾಗುತ್ತದೆ, ಸಂಸಾರ ಕಷ್ಟಗಳು ಮುಕ್ತವಾಗುತ್ತವೆ. ಇವಳ ಧ್ಯಾನ ಇಹ ಮತ್ತು ಪರದಲ್ಲಿ ಶ್ರೇಯಸ್ಕರ. ಶಾಂತಿ, ಧೈರ್ಯ, ಸಮಾಧಾನ ಸಿಗುವುದಲ್ಲದೆ, ಧನಲಾಭ, ಗೃಹಲಾಭವಾಗುವುದು. ಅಂದು ಯೋಗಿಗಳು ಈ ದೇವಿಯನ್ನು ಆರಾಧಿಸುವಾಗ ಮನಸ್ಸನ್ನು ‘ಮಣಿಪೂರ’ ಚಕ್ರದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.

ಅಂದು ಈ ಕೆಳಗಿನ ಶ್ಲೋಕವನ್ನು 18 ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ಮನಸ್ಸಿನ ಕಾಮನೆಗಳು ಈಡೇರುವುವು:

ಯಾ ದೇವಿ ಸರ್ವಭೂತೇಷು ನಿದ್ರಾರೂಪೇಣ ಸಂಸ್ಥಿತಾ |

ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋ ನಮಃ ||

(ಲೇಖಕರು ಧಾರ್ವಿುಕ ಚಿಂತಕರು)

Leave a Reply

Your email address will not be published. Required fields are marked *