ಸಂಘಟನೆಗಳ ಅಭಿವೃದ್ಧಿಯಿಂದ ಸಮಾಜದ ಬೆಳವಣಿಗೆ

ಕಳಸ: ಸಂಘಟನೆಗಳ ಬೆಳವಣಿಗೆಯಿಂದ ಸಮಾಜದ ಏಳಿಗೆ ಸಾಧ್ಯ ಎಂದು ಹೊರನಾಡಿನ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಹೇಳಿದರು.

ಹೊರನಾಡಿನ ಮಾಂಗಲ್ಯ ಮಂಟಪದಲ್ಲಿ ಏರ್ಪಡಿಸಿದ್ದ ರೋಟರಿ ಸಮುದಾಯ ದಳ ಪದಗ್ರಹಣ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಸಮುದಾಯ ದಳದಲ್ಲಿ ಎಲ್ಲರೂ ಒಟ್ಟು ಸೇರಿ ಒಂದೇ ಕುಟುಂಬದಂತೆ ಸೃಜನಶೀಲರಾಗಿ ಕಾರ್ಯನಿರ್ವಹಿಸುವುದರಿಂದ ಊರಿನ ಬದಲಾವಣೆ ಸಾಧ್ಯ. ಸಂಘಟನೆ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ದೇಶ ಸಮೃದ್ಧಿಯಾಗಬೇಕಾದರೆ ಪ್ರಕೃತಿ ಸಂರಕ್ಷಣೆ ಅಗತ್ಯ ಎಂದರು.

ಸಮುದಾಯ ದಳದ ಚೇರ್​ವುನ್ ರಾಜಲಕ್ಷ್ಮೀ ಬಿ. ಜೋಷಿ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ನಾಯಕತ್ವ ಗುಣ ಬೆಳೆಯುತ್ತದೆ. ನಮ್ಮ ಪ್ರತಿಭೆ ಹಾಗೂ ಸಮಾಜದೊಂದಿಗೆ ಬೆರೆತಾಗ ಸಾರ್ವಜನಿಕ ಸೇವೆ ಮಾಡಲು ಉತ್ತಮ ವೇದಿಕೆ ಲಭಿಸುತ್ತದೆ. ನಾವು ಸಮಾಜಕ್ಕೆ ನೀಡುವ ಕೊಡುಗೆಯಿಂದ ಮಾತ್ರ ತೃಪ್ತಿಕರ ಜೀವನ ನಡೆಸಬಹುದು ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಉದ್ಯಮಿ ಎಚ್.ಸಿ.ಅಣ್ಣಯ್ಯ, ರಾಜಕೀಯ ರಹಿತವಾಗಿ ಸಮಾಜ ಸೇವೆ ಮಾಡಲು ಈ ಸಂಸ್ಥೆ ನನಗೆ ಅವಕಾಶ ಮಾಡಿಕೊಟ್ಟಿದೆ. ಈ ಹಿಂದೆ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾಗ ಹೊರನಾಡಿನಿಂದ ಅಕ್ಕಿ ತಂದು ಊಟ ಮಾಡುತ್ತಿದ್ದರು. ಆದರೆ ಈಗ ಅನ್ನಪೂರ್ಣೆಶ್ವರಿ ಕೃಪೆಯಿಂದ ಎಲ್ಲರೂ ಸಾಕಷ್ಟು ಸ್ಥಿತಿವಂತರಾಗಿದ್ದಾರೆ. ದೇವರಿಗೆ ಮೆಚ್ಚುವ ರೀತಿಯಲ್ಲಿ ನಾವು ಸಾಮಾಜಿಕ ಸೇವೆಗಳನ್ನು ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *