ಕೆ.ಆರ್.ಪೇಟೆ: ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೃಷಿ ಮೇಲಿನ ಪ್ರೇಮ ಕಡಿಮೆ ಆಗಿರಲಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ಸಾವಯವ ಪದ್ಧತಿಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿರುವ ತಾಲೂಕಿನ ಮಾಕವಳ್ಳಿ ಗ್ರಾಮದ ಸರ್ಕಾರಿ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಸ್.ದೊಡ್ಡೇಗೌಡ ರೈತರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ಮಾಕವಳ್ಳಿ ಗ್ರಾಮದ ದಿ.ಸುಬ್ಬೇಗೌಡರ ಪುತ್ರ ಎಂ.ಎಸ್.ದೊಡ್ಡೇಗೌಡ ಅವರು 10 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಖುಷಿಯಾಗಿದ್ದಾರೆ. ಬಿಎಸ್ಸಿ, ಬಿಎಡ್ ಪದವಿ ಪಡೆದು ಪ್ರೌಢಶಾಲೆಯಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ 1986ರಲ್ಲಿ ಸೇವೆಗೆ ಸೇರಿ 30 ವರ್ಷ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದಾರೆ. ಮೂಲತಃ ರೈತ ಕುಟುಂಬದವರಾಗಿದ್ದರಿಂದ ಸೇವೆಯಲ್ಲಿ ಇರುವಾಗಲೇ ಕೃಷಿ ಕಡೆ ಮುಖ ಮಾಡಿದ್ದರು.
ಬಿಡುವಿನ ಸಮಯದಲ್ಲಿ ಕೃಷಿ ಮಾಡುತ್ತಿದ್ದರು. ಪಿತ್ರಾರ್ಜಿತ 6 ಎಕರೆ ಜಮೀನು ಜತೆಗೆ 4 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ. ತಂದೆ ಕಾಲದಿಂದಲೂ ಜಮೀನಿಗೆ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿದ್ದರು. ಸಾವಯವ ಮತ್ತು ನೈಸರ್ಗಿಕ ಕೃಷಿ ಬಗ್ಗೆ ಪ್ರೇರಣೆಗೊಂಡು ಮಾಡಲು ಯತ್ನಿಸಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಜಮೀನಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಗೂ ಕಾಲಕ್ರಮೇಣ ಎಲ್ಲ ಜಮೀನಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡಿ ರಾಸಾಯನಿಕ ಮುಕ್ತ ಬೆಳೆ ಬೆಳೆಯುತ್ತಿದ್ದಾರೆ.
ಅಡಕೆ 1000, ತೆಂಗು 500, ಮೆಣಸು 500, ಕಾಫಿ 300, ಏಲಕ್ಕಿ 150, ಬಾಳೆ 300, ಬಟರ್ ಫ್ರೂಟ್ 4, ಕಿತ್ತಳೆ 5, ನಿಂಬೆ 5, ಹಿರಳಿ 5, ಸೇಬು 5, ಸಪೋಟ 5, ಜಂಬು ನೇರಳೆ 5 ಸೇರಿ ಇತರ ಹಣ್ಣಿನ ಗಿಡಗಳಿವೆ. ಕೃಷಿ ಜತಗೆ ಹೈನುಗಾರಿಕೆ ಮಾಡುತ್ತಿರುವುದರಿಂದ ಹಸು 2, ಎಮ್ಮೆ 3, ಕುರಿ 10, ಟಗರು 15, ಕೋಳಿ 50 ಸಾಕಣೆ ಮಾಡುತ್ತಿದ್ದಾರೆ. ಮೇವಿಗೆ ಹಗಸೆಗಿಡಗಳು ಬೆಳೆದಿದ್ದಾರೆ. ಇದರಿಂದ ಜಾನುವಾರುಗಳಿಗೆ ಮೇವು ಪೂರೈಸುತ್ತಿದ್ದಾರೆ.
ವಾರ್ಷಿಕ ಅಡಕೆ 3 ಲಕ್ಷ ರೂ., ತೆಂಗು 3 ಲಕ್ಷ ರೂ., ಮೆಣಸು 2 ಲಕ್ಷ ಲಕ್ಷ ರೂ., ಇತರ ಬೆಳೆಗಳಿಂದ 2 ಲಕ್ಷ ರೂ., ಹೈನುಗಾರಿಕೆ ಸಾಕಣೆಯಿಂದ 2ಲಕ್ಷ ರೂ. ಸೇರಿ ಸುಮಾರು 12 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಜಾನುವಾರು ಸಾಕಣೆಯಿಂದ ಗೊಬ್ಬರ ಸಿಗುತ್ತಿದ್ದು ಕೃಷಿ ಬೆಳೆಗಳಿಗೆ ಸಹಕಾರಿಯಾಗುತ್ತಿದೆ.
ಮನೆ ಬಳಕೆಗೆ ತರಕಾರಿ, ಹೂ ಗಿಡಗಳನ್ನು ಬೆಳೆದು ಸ್ವಾವಲಂಬಿಯಾಗಿದ್ದಾರೆ. ಈರುಳ್ಳಿ, ಬದನೆ, ಬೆಳ್ಳುಳ್ಳಿ ಸೇರಿ ಇತರ ತರಕಾರಿ ಬೆಳೆಯಲು ಕೈತೋಟ ಮಾಡಿಕೊಂಡಿದ್ದಾರೆ. ಮಲ್ಲಿಗೆ, ದಾಸವಾಳ, ಗುಲಾಬಿ ಹೂಗಿಡಗಳನ್ನು ನೆಟ್ಟು ಬೆಳೆಸಿ ದೇವರಿಗೆ ಹಾಗೂ ಸ್ವಂತಕ್ಕೆ ಬಳಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಸ್ವತಃ ತಯಾರಿಸಿಕೊಳ್ಳುತ್ತಿದ್ದಾರೆ. ಕೊಬ್ಬರಿ ಜತೆಗೆ ಕಡ್ಲೇಬೀಜ ಬೆರಸಿ ಎಣ್ಣೆ ಮಾಡಿಕೊಂಡು ಅಡುಗೆಗೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ತರಕಾರಿಯನ್ನೂ ಖರೀದಿಸದೆ ಬೆಳೆದುಕೊಳ್ಳುತ್ತಿದ್ದಾರೆ.
ಸಾವಯವ ಮತ್ತು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು, ಕಳೆ ನಿಯಂತ್ರಿಸಲು ಬ್ರಷ್ ಕಟರ್‌ಗಳ ಬಳಕೆ, ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್‌ಗಳ ಬಳಕೆ ತೋಟದ ಮಣ್ಣಿನ ಫಲವತ್ತತೆ ವೃದ್ಧಿಸಿದೆ. ಕಳೆನಾಶಕಗಳು, ಕೀಟ, ರೋಗನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆದು ಮುಂದಿನ ಪೀಳಿಗೆಗೆ ಸುಸ್ಥಿರ ಸಮೃದ್ಧಿ ಪರಿಸರವನ್ನು ಕೊಡುಗೆ ನೀಡುತ್ತಿದ್ದಾರೆ.
ಜಮೀನಿಗೆ ನೀರಾವರಿ ಸೌಲಭ್ಯಕ್ಕಾಗಿ 3 ಕೊಳವೆಬಾವಿಗಳನ್ನು ಕೊರೆಸಿ, ಅದರಿಂದ ತೋಟಕ್ಕೆಲ್ಲ ನೀರುಣಿಸುತ್ತಿದ್ದಾರೆ. ಗೊಬ್ಬರವಾಗಿ ಕೊಟ್ಟಿಗೆ ಗೊಬ್ಬರ, ಬೂದಿಗೊಬ್ಬರವನ್ನು ಹಾಕುತ್ತಿದ್ದಾರೆ. ಜೀವಾಮೃತವನ್ನು ಬೆಳೆಗಳಿಗೆ ಸಿಂಪಡಿಸುತ್ತಿದ್ದು ಜಮೀನಿನಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗಿ ಬೆಳೆ ಅಭಿವೃದ್ಧಿಗೆ ಸಹಕಾರಿಯಾಗಿವೆ. ಗೊಬ್ಬರ, ಜೀವಾಮೃತವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸುವುದನ್ನು ಕಲಿತಿರುವುದರಿಂದ ಕೃಷಿ ಸುಗಮವಾಗಿದೆ. ಇವರ ಛಲದಿಂದ ಕಡಿಮೆ ಜಮೀನಿನಲ್ಲಿ ಪ್ರತಿಯೊಂದು ಬೆಳೆಗೂ ವಿಭಿನ್ನ ಪದ್ಧತಿ ಅನುಸರಿಸಿದ್ದಾರೆ. ತೋಟಕ್ಕೆ ಮಲ್ಚಿಂಗ್ ಮಾಡುವ ಮೂಲಕ ತೇವಾಂಶ ಕಾಪಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಭೂಮಿ ಉಳುಮೆ ಮಾಡದೆ ಕೇವಲ ಮಲ್ಚಿಂಗ್ ಮೂಲಕ ತೋಟ ನಿರ್ವಹಣೆ ಮಾಡಿದ್ದಾರೆ.
ಇವರ ತೋಟದ ಸುತ್ತಮುತ್ತಲಿನ ರೈತರು ನೈಸರ್ಗಿಕ ಕೃಷಿಗೆ ಪರಿವರ್ತನೆಯಾಗುತ್ತಿದ್ದಾರೆ. ಹಲವು ರೈತರು ಇವರನ್ನು ಅನುಕರಿಸುತ್ತಿದ್ದಾರೆ. ಇವರ ಕೃಷಿಗೆ ಪತ್ನಿ ಲಲಿತಾ ದೊಡ್ಡೇಗೌಡ ಜತೆಯಾಗಿ ನಿಂತಿದ್ದಾರೆ. ಮಗ ಅಮಿತ್ ಇಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ರೈತರು ಸಾಂಪ್ರದಾಯಿಕ ಕೃಷಿ ಬದಲಿಗೆ ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಬೇಕು. ಕೃಷಿ ನಷ್ಟ ಎನ್ನುವವರಿಗೆ ರೈತ ದೊಡ್ಡೇಗೌಡ ಮಾದರಿ. ಯಶಸ್ವಿ ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿದ್ದಾರೆ. ಯುವ ರೈತರಿಗೆ ಮಾದರಿಯಾಗಿದ್ದಾರೆ. ಸಮಗ್ರ ಬೆಳೆ ಪದ್ಧತಿಯಿಂದ ಆದಾಯ ಹೆಚ್ಚಾಗುವಂತೆ ಮಾಡಿಕೊಂಡಿದ್ದಾರೆ.
ಕೆ.ಎಸ್.ದರ್ಶಿನಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, ಕೃಷಿ ಇಲಾಖೆ, ಕೆ.ಆರ್.ಪೇಟೆಸಾವಯವ ಹಾಗೂ ನೈಸರ್ಗಿಕ ಕೃಷಿಯಿಂದ ರೈತರ ಆರ್ಥಿಕ ಜೀವನ ಸುಧಾರಿಸಲಿದೆ. ರಾಸಾಯನಿಕ ಕೃಷಿ ಆರ್ಥಿಕ ನಷ್ಟ ಉಂಟಾಗಲಿದೆ. ಮಿಶ್ರ ಬೆಳೆಗಳಿಂದ ಸುಸ್ಥಿರ ಆದಾಯ ಗಳಿಸಬಹುದು. ರೈತನಿಗೆ ಮನಸಿದ್ದರೆ ಕೃಷಿಯಲ್ಲಿ ಏನು ಬೇಕಾದರೂ ಮಾಡಬಹುದು. ಹೆಚ್ಚು ಖರ್ಚಿಲ್ಲದೆ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಬೇಕಾಬಿಟ್ಟಿ ಬೆಳೆಯುವ ಬದಲು, ಇಚ್ಛಾಶಕ್ತಿಯಿಂದ ಬೆಳೆದು ಹೆಚ್ಚಿನ ಆದಾಯ ಪಡೆಯಬಹುದು.
ಎಂ.ಎಸ್.ದೊಡ್ಡೇಗೌಡ ಸಾವಯವ ಕೃಷಿಕ, ನಿವೃತ್ತ ಮುಖ್ಯೋಪಾಧ್ಯಯ