ಸಂತ್ರಸ್ತರಿಗೆ ನೆರವಿನ ಮಹಾಪೂರ

ಪುತ್ತೂರು:  ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಬೆಳ್ತಂಗಡಿಗೆ ರಾಜ್ಯಾದ್ಯಂತದಿಂದ ನೆರವು ಹರಿದುಬರುತ್ತಿದ್ದು, ಬೆಳ್ತಂಗಡಿ ಶಾಸಕರ ಕಚೇರಿ ಶ್ರಮಿಕ ದಿನದ 24 ಗಂಟೆಯೂ ಕಾರ್ಯಾಚರಿಸಿ ಈ ನೆರವು ಸಾಮಗ್ರಿಗಳನ್ನು ಸಮರ್ಪಕ ವಿತರಣೆಗೆ ಕ್ರಮ ಕೈಗೊಂಡಿದೆ.

ದಾನಿಗಳು ನೀಡುವ ದಿನಬಳಕೆಯ ವಸ್ತುಗಳನ್ನು ಸೂಕ್ತ ಸ್ಥಳಕ್ಕೆ ರವಾನಿಸುವುದು ಸೇರಿದಂತೆ ತುರ್ತು ಸೇವೆಗಾಗಿ 450 ಯುವಕರ ತಂಡ ಕಾರ್ಯಾಚರಿಸುತ್ತಿದೆ. ಸಂತ್ರಸ್ತರಿಗೆ ನಿರಂತರ ಅಗತ್ಯ ವಸ್ತು ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಶ್ರಮಿಕ ಶಾಸಕರ ಕಾರ್ಯಾಲಯದಿಂದ ಪ್ರತಿದಿನ 10 ಜನರಿರುವ 15 ತಂಡ, ಸಿಬ್ಬಂದಿ, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಅನೇಕರು ಸಂತ್ರಸ್ತರ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನಿಂದ ಭರಪೂರ ನೆರವು: ಬೆಂಗಳೂರಿನಿಂದ ಬೆಳ್ತಂಗಡಿಗೆ ಭರಪೂರ ನೆರವು ದೊರಕಿದೆ. ವಂದೇ ಭಾರತಂ ಸಂಸ್ಥೆ ಹಾಗೂ ಮಹಾಪ್ರತ್ಯಂಗಿರಿ ಚಾರಿಟಿಯಿಂದ ಸುಮಾರು 15 ಲಕ್ಷ ರೂ. ಮೊತ್ತದ ವಸ್ತು ಶ್ರಮಿಕ ಕಚೇರಿಗೆ ತಲುಪಿದೆ. ಕೆಐಒಸಿಎಲ್ ಸಂಸ್ಥೆ 100 ಸಂತ್ರಸ್ತ ಕುಟುಂಬಗಳಿಗೆ ಬೇಕಾಗುವ ಅಡುಗೆ ಪಾತ್ರೆ ಪರಿಕರಗಳ ಕಿಟ್ ನೀಡಿದೆ. ಬೆಂಗಳೂರಿನ ಸಂಸದ ತೇಜಸ್ವಿಸೂರ್ಯ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದ ಪರಿಹಾರ ಸಾಮಗ್ರಿ ಶಾಸಕರ ಕಚೇರಿಗೆ ಶನಿವಾರ ತಲುಪಿದೆ.

ರಾಮಚಂದ್ರಾಪುರ ಮಠದಿಂದ ಮೇವು: ಹೊಸನಗರ ಶ್ರೀರಾಮಚಂದ್ರಾಪುರ ಮಠ, ಮಂಡ್ಯ ಜಿಲ್ಲಾ ಭಾರತೀಯ ಗೋಪರಿವಾರ ವತಿಯಿಂದ 300ಕ್ಕೂ ಅಧಿಕ ಗೋವುಗಳು ಗೋವುಗಳಿಗೆ ಮೇವು ಪೂರೈಸಲಾಗಿದೆ. ಶನಿವಾರ ಬೆಳ್ತಂಗಡಿಗೆ ಆಗಮಿಸಿದ ಮೇವು ತುಂಬಿದ ಲಾರಿ ಶ್ರಮಿಕದಿಂದ ಮಾಹಿತಿ ಪಡೆದು ವಿವಿಧ ಗೋ ನೆಲೆಗಳಿಗೆ ಕಳುಹಿಸಲಾಯಿತು.

ದಿಡುಪು ಕುಕ್ಕಾವು ಸೇತುವೆ ದುರಸ್ತಿ ಪೂರ್ಣ
ಕೊಚ್ಚಿಕೊಂಡು ಹೋಗಿದ್ದ ದಿಡುಪೆ ಕುಕ್ಕಾವು ಸೇತುವೆ ದುರಸ್ತಿಗೊಳಿಸಿ ಶುಕ್ರವಾರದಿಂದಲೇ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ನದಿಯಿಂದ ಬೃಹತ್ ಮರ, ಮಣ್ಣು, ಕಲ್ಲು ತೆರವುಗೊಳಿಸಿ ನೀರಿನ ಸರಾಗ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಕ್ಕಾವು ಸೇತುವೆ ತಳಭಾಗಕ್ಕೆ ಪೈಪ್ ಅಳವಡಿಸಿ ಜೆಸಿಬಿ ಮೂಲಕ ಮಣ್ಣು ತುಂಬಿ ಬೃಹತ್ ವಾಹನಗಳ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ದಿಡುಪೆ ವ್ಯಾಪ್ತಿಯ ನದಿಗಳಲ್ಲಿ ಸಿಲುಕಿಕೊಂಡಿದ್ದ ಬೃಹತ್ ಮರ, ಬಂಡೆಗಳ ತೆರವು ಕಾರ್ಯಕ್ಕೆ 15 ಜೆಸಿಬಿ ಬಳಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವ ವಹಿಸಿದ್ದಾರೆ. ದಿಡುಪೆಯ ದರ್ದಕಂಡ ಎಂಬಲ್ಲಿ 500 ಮೀ.ಉದ್ದದಲ್ಲಿ ತೊರೆ ಸೃಷ್ಟಿಯಾಗಿ 70ಕ್ಕೂ ಹೆಚ್ಚು ಬೃಹತ್ ಮರಗಳು ಸೇತುವೆ ಹಾಗೂ ದರ್ದಕಂಡ ಸುಂದರ ಎಂಬವರ ತೋಟದಲ್ಲಿ ರಾಶಿ ಬಿದ್ದಿದ್ದು, ಶನಿವಾರ ತೆರವುಗೊಳಿಸಲಾಯಿತು.

Leave a Reply

Your email address will not be published. Required fields are marked *