ದೇಶೀಯ ಕ್ರಿಕೆಟಿಗರ ವಲಸೆ ಪರ್ವ

ದೇಶೀಯ ಕ್ರಿಕೆಟ್​ನ ಮೊದಲ ಟೂರ್ನಿ ದುಲೀಪ್ ಟ್ರೋಫಿ ಮಳೆ ಅಡ್ಡಿಯ ನಡುವೆಯೂ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇಂಡಿಯಾ ರೆಡ್, ಗ್ರೀನ್ ಹಾಗೂ ಬ್ಲ್ಯೂ ತಂಡಗಳ ಮುಖಾಮುಖಿಯ ಬಳಿಕ ಈಗ ರಾಜ್ಯ ತಂಡಗಳು ದೇಶೀಯ ಕ್ರಿಕೆಟ್​ಗೆ ಅಣಿಯಾಗಿವೆ. ಸೆ.24ರಿಂದ ಅಕ್ಟೋಬರ್ 25ರವರೆಗೆ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳು ನಡೆಯಲಿವೆ. ಅದಕ್ಕೂ ಮುನ್ನ ವಿವಿಧ ಆಟಗಾರರು, ಕೋಚ್​ಗಳ ವಲಸೆ ಪ್ರಕ್ರಿಯೆಯೂ ಜಾರಿಯಲ್ಲಿದೆ. ರಾಜ್ಯ ತಂಡದ ಪ್ರಮುಖ ಆಟಗಾರರು ಈಗಾಗಲೇ ವಿವಿಧ ತಂಡಗಳಿಗೆ ವಲಸೆ ಹೋಗಿದ್ದು, ಈ ಬಾರಿ ಕರ್ನಾಟಕ ತಂಡದ ಜವಾಬ್ದಾರಿ ಯುವ ಹೆಗಲುಗಳ ಮೇಲಿದೆ. 2019-20ರ ದೇಶೀಯ ಕ್ರಿಕೆಟ್​ನಲ್ಲಿ ಈವರೆಗೂ ಆಗಿರುವ ಪ್ರಮುಖ ವಲಸೆ ಪ್ರಕ್ರಿಯೆಯ ವಿವರ ಇಲ್ಲಿದೆ.

ಉತ್ತರಾಖಂಡ ತಂಡಕ್ಕೆ ಉನ್ಮುಕ್ತ್ ಚಂದ್

ದೆಹಲಿಯ 26 ವರ್ಷದ ಬ್ಯಾಟ್ಸ್​ಮನ್ ಉನ್ಮುಕ್ತ್ ಚಂದ್, ಈ ಬಾರಿ ತಮ್ಮ ಮೂಲವನ್ನು ಉತ್ತರಾಖಂಡಕ್ಕೆ ಬದಲಿಸಿದ್ದಾರೆ. ಉತ್ತರಾಖಂಡ ತಂಡವನ್ನು ಕೂಡ ಅವರು ಮುನ್ನಡೆಸಲಿದ್ದಾರೆ. 2012ರಲ್ಲಿ ವಿಶ್ವಕಪ್ ಗೆದ್ದ 19 ವಯೋಮಿತಿ ಭಾರತ ತಂಡದ ನಾಯಕರಾಗಿದ್ದ ಉನ್ಮುಕ್ತ್, ಆರಂಭದಲ್ಲಿ ಉತ್ಸಾಹಿ ಆಟಗಾರನಾಗಿ ಕಾಣಿಸಿಕೊಂಡರೂ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿರಲಿಲ್ಲ. ಹಲವು ಟೂರ್ನಿಗಳಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದರೂ, ಯಶಸ್ಸು ಕಾಣುವಲ್ಲಿ ವಿಫಲರಾಗಿದ್ದು ಮಾತ್ರವಲ್ಲ ತಂಡದಲ್ಲಿ ಕಾಯಂ ಆಟಗಾರನ ಸ್ಥಾನ ಕೂಡ ಸಿಕ್ಕಿರಲಿಲ್ಲ.

ಗೋವಾ ತಂಡಕ್ಕೆ ಸಿಎಂ ಗೌತಮ್

ರಾಜ್ಯ ತಂಡದ ಅಗ್ರ ವಿಕೆಟ್ ಕೀಪರ್ ಸಿಎಂ ಗೌತಮ್ ಕೂಡ ಈ ಬಾರಿ ಜೆರ್ಸಿ ಬದಲಿಸಿದ್ದಾರೆ. ಗೋವಾ ಪರ ದೇಶೀಯ ಕ್ರಿಕೆಟ್ ಆಡಲು ತೀರ್ಮಾನ ಮಾಡಿರುವ ಸಿಎಂ ಗೌತಮ್ ಈಗಾಗಲೇ ಅದರ ಸಿದ್ಧತೆಯನ್ನೂ ಆರಂಭಿಸಿದ್ದಾರೆ. 2008ರಲ್ಲಿ ಕರ್ನಾಟಕ ತಂಡದ ಪರವಾಗಿ ಪದಾರ್ಪಣೆ ಮಾಡಿದ್ದ ಗೌತಮ್ 94 ಪಂದ್ಯಗಳನ್ನು ಆಡಿದ್ದಾರೆ.

ಹಲವು ರಾಜ್ಯ ತಂಡಗಳ ಕೋಚ್ ಬದಲಾವಣೆ

ಕೋಚ್​ಗಳಲ್ಲೂ ಹೆಚ್ಚಿನ ತಂಡಗಳಲ್ಲಿ ಪ್ರಮುಖ ಬದಲಾವಣೆ ಆಗಿವೆ. ಕಳೆದ ಋತುವಿನಲ್ಲಿ ಉತ್ತರಾಖಂಡ ಪ್ಲೇಟ್ ಡಿವಿಜನ್​ನಲ್ಲಿ ಮೊದಲ ಸ್ಥಾನಿಯಾಗಲು ಕಾರಣರಾಗಿದ್ದ ಕೆಪಿ ಭಾಸ್ಕರ್, ದೆಹಲಿ ತಂಡಕ್ಕೆ ಕೋಚ್ ಆಗಿ ಮರಳಿದ್ದಾರೆ. ವಿವಾದಾತ್ಮಕ ನಡೆಯಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ವಿನಾಯಕ್ ಸಾಮಂತ್​ರನ್ನು ಮತ್ತೆ ಕೋಚ್ ಆಗಿ ನೇಮಿಸಿದೆ. ಮುಂಬೈ ತಂಡ ಕಳೆದ ಋತುವಿನ ರಣಜಿ ಟ್ರೋಫಿಯ ಲೀಗ್ ಹಂತದಲ್ಲಿಯೇ ನಿರ್ಗಮಿಸಿದಾಗ ವಿನಾಯಕ್ ಸಾಮಂತ್​ರನ್ನು ಕೋಚ್ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಕರ್ನಾಟಕ ಸುನೀಲ್ ಜೋಶಿ, ಜೆ. ಅರುಣ್ ಕುಮಾರ್ ಹಾಗೂ ದೊಡ್ಡಗಣೇಶ್ ಕ್ರಮವಾಗಿ ಉತ್ತರಪ್ರದೇಶ, ಪುದುಚೇರಿ ಹಾಗೂ ಗೋವಾ ತಂಡದ ಕೋಚ್ ಆಗಿ ನೇಮಕವಾಗಿದ್ದರೆ, ರಾಜ್ಯ ತಂಡದ ಮಾಜಿ ಕೋಚ್ ಪಿವಿ ಶಶಿಕಾಂತ್, ಮಿಜೋರಾಂ ತಂಡದ ತರಬೇತುದಾರರಾಗಿದ್ದಾರೆ. ಉತ್ತರಾಖಂಡ ತಂಡಕ್ಕೆ ಭಾರತ ತಂಡದ ಮಾಜಿ ಆಟಗಾರ ಗುರುಶರಣ್ ಸಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.

ಪುದುಚೇರಿಗೆ ವಿನಯ್ ಕುಮಾರ್

ಕರ್ನಾಟಕ ತಂಡದ ಪರ ಭರ್ಜರಿ ಯಶಸ್ಸು ಕಂಡಿದ್ದ ವಿನಯ್ ಕುಮಾರ್, ಹಾಲಿ ಋತುವಿನಿಂದ ಪುದುಚೇರಿ ತಂಡವನ್ನು ಪ್ರತಿನಿಧಿಸಲಿದ್ದಾರೆ. 35 ವರ್ಷದ ವಿನಯ್ ಕುಮಾರ್, 2013-14 ಹಾಗೂ 2014-15ರಲ್ಲಿ ರಾಜ್ಯ ತಂಡವನ್ನು ರಣಜಿ ಟ್ರೋಫಿ, ವಿಜಯ್ ಹಜಾರೆ ಹಾಗೂ ಇರಾನಿ ಕಪ್ ಗೆಲುವಿಗೆ ಕಾರಣರಾಗಿದ್ದರು. 2004-05ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದ ವಿನಯ್ ಕುಮಾರ್ ಈವರೆಗೂ 459 ವಿಕೆಟ್ ಉರುಳಿಸಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ವೇಗದ ಬೌಲರ್ ಎನ್ನುವ ಹೆಮ್ಮೆಯೂ ಇವರದಾಗಿದೆ. ತಮಿಳುನಾಡು ತಂಡದ ಮಾಜಿ ಆಟಗಾರ, ಕಳೆದ ಋತುವಿನಲ್ಲಿ ಕೇರಳ ತಂಡ ಪ್ರತಿನಿಧಿಸಿದ್ದ ಕೆಬಿ ಅರುಣ್ ಕಾರ್ತಿಕ್ ಕೂಡ ಪುದುಚೇರಿ ಪರವಾಗಿ ಆಡಲು ತೀರ್ವನಿಸಿದ್ದಾರೆ. ತಮಿಳುನಾಡು ತಂಡದಿಂದಲೂ ವಿಕೆಟ್ ಕೀಪರ್ ಅರುಣ್ ಕಾರ್ತಿಕ್​ಗೆ ಆಫರ್ ಬಂದರೂ, ಪುದುಚೇರಿ ಪರವಾಗಿ ಆಡಲು ತೀರ್ವನಿಸಿದ್ದಾರೆ.

ನಾಗಾಲ್ಯಾಂಡ್​ಗೆ ಸ್ಟುವರ್ಟ್ ಬಿನ್ನಿ

ಕರ್ನಾಟಕ ತಂಡದ ಅನುಭವಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಈಶಾನ್ಯ ರಾಜ್ಯದ ತಂಡ ನಾಗಾಲ್ಯಾಂಡ್ ಪರವಾಗಿ ಈ ವರ್ಷ ಆಡಲಿದ್ದಾರೆ. ಅವರೊಂದಿಗೆ ನಾಗಾಲ್ಯಾಂಡ್ ತಂಡದಲ್ಲಿ ಮಹಾರಾಷ್ಟ್ರದ ಶ್ರೀಕಾಂತ್ ಮುಂಡೆ ಹಾಗೂ ಯೋಗೇಶ್ ಟಕವಾಲೆ ಆಡಲಿದ್ದಾರೆ.

ಕೇರಳಕ್ಕೆ ರಾಬಿನ್ ಉತ್ತಪ್ಪ ನಾಯಕ

ಸೌರಾಷ್ಟ್ರದಿಂದ ಕೇರಳ ತಂಡಕ್ಕೆ ವಲಸೆ ಹೋಗಿರುವ ಕರ್ನಾಟಕದ ಅನುಭವಿ ಆಟಗಾರ ರಾಬಿನ್ ಉತ್ತಪ್ಪ, ಈ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ತಂಡದ ನಾಯಕತ್ವ ವಜಹಿಸಿಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೂ ಉತ್ತಪ್ಪ ಕೇರಳ ತಂಡದ ನಾಯಕರಾಗಿದ್ದಾರೆ.

ಕೆಬಿ ಪವನ್, ಅಬ್ರಾರ್ ಕಾಜಿ ಮಿಜೋರಾಂಗೆ ಸೇರ್ಪಡೆ

ವಿಕೆಟ್ಕೀಪರ್ ಬ್ಯಾಟ್ಸ್​ಮನ್ ಕೆಬಿ ಪವನ್ ಹಾಗೂ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಬ್ರಾರ್ ಕಾಜಿ ಮಿಜೋರಾಂ ತಂಡದ ಪರವಾಗಿ ಆಡಲಿದ್ದಾರೆ. ಕಳೆದ ಋತುವಿನಲ್ಲಿ ಕಾಜಿ ನಾಗಾಲ್ಯಾಂಡ್ ಪರವಾಗಿ ಆಡಿದ್ದಲ್ಲದೆ, 841 ರನ್ ಸಿಡಿಸಿ ಗಮನಸೆಳೆದಿದ್ದರು. ಮಿಜೋರಾಂ ತಂಡಕ್ಕೆ ರಾಜ್ಯ ತಂಡದ ಮಾಜಿ ಕೋಚ್ ಪಿವಿ ಶಶಿಕಾಂತ್ ಕೋಚ್ ಆಗಿದ್ದಾರೆ.

Leave a Reply

Your email address will not be published. Required fields are marked *