ಎನ್​ಪಿಎಸ್ ಸಿಹಿಕಹಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಎನ್​ಪಿಎಸ್ (ಹೊಸ ಪಿಂಚಣಿ ಯೋಜನೆ) ರದ್ದತಿ ವಿಚಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವಂತೆಯೇ, ಆ ನೌಕರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಕೆಲವೊಂದು ಸೌಲಭ್ಯ ನೀಡಲು ಸಮ್ಮತಿಸಿದೆ. ಈ ಸಿಹಿಸುದ್ದಿ ಹೊರತಾಗಿಯೂ ಇಡೀ ಯೋಜನೆ ರದ್ದತಿ ಕುರಿತು ಅಧ್ಯಯನಕ್ಕಾಗಿ ಮುಖ್ಯಮಂತ್ರಿಗಳು ಸಮಿತಿ ರಚನೆಗೆ ನಿರ್ಧರಿಸಿರುವುದು ನೌಕರರನ್ನು ಕೆರಳಿಸಿದೆ.

ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ನೌಕರರು, ಅದರ ಜತೆಗೆ ಬೇರೆ ಬೇಡಿಕೆಗಳನ್ನೂ ಸರ್ಕಾರದ ಮುಂದಿಡುತ್ತಿದ್ದರು. ಎನ್​ಪಿಎಸ್ ರದ್ದತಿ ಕೇಂದ್ರ ಸರ್ಕಾರಕ್ಕೆ ಸೇರಿದ ವಿಷಯವಾಗಿರುವ ಕಾರಣ ಅಲ್ಲಿ ನಿರ್ಧಾರವಾಗುವ ತನಕ ಬೇರೆ ಬೇರೆ ಸೌಲಭ್ಯಗಳು ಸಿಗಬೇಕು ಎಂಬುದು ನೌಕರರ ಬೇಡಿಕೆ.

ತಾತ್ವಿಕ ಒಪ್ಪಿಗೆ: ಎನ್​ಪಿಎಸ್ ನೌಕರರ ಸಂಘ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜತೆ ಶುಕ್ರವಾರ ನಡೆಸಿದ ಸಭೆಯಲ್ಲಿ 4 ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇದು ಒಂದರ್ಥದಲ್ಲಿ ನೌಕರರಿಗೆ ಎರಡನೇ ಜಯವಾಗಿದೆ.

ಮುಖ್ಯಮಂತ್ರಿ ಒಪ್ಪಿಗೆ ಪಡೆದು ಆದೇಶ ಹೊರಡಿಸಲು ಕಡತ ಸಿದ್ಧಪಡಿಸಿ ಬೆಳಗಾವಿಗೆ ತರುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಪಕ್ಷದ ಪ್ರಣಾಳಿಕೆಯಲ್ಲಿ ಎನ್​ಪಿಎಸ್ ರದ್ದು ಮಾಡುವ ಭರವಸೆ ನೀಡಿದ್ದರಿಂದ 2 ಲಕ್ಷಕ್ಕೂ ಅಧಿಕ ನೌಕರರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.

ನಮ್ಮ ಬೇಡಿಕೆಗಳಿಗೆ ಹಣಕಾಸು ಇಲಾಖೆ ಸ್ಪಂದಿಸಿದೆ. ಆದರೆ ಇಡೀ ಯೋಜನೆ ರದ್ದಾಗಲು ರಾಜಕೀಯ ನಿರ್ಣಯವಾಗಬೇಕಿದೆ. ಆದ್ದರಿಂದ ಸಿಎಂ ಮೇಲೆ ಒತ್ತಡ ತರಲು ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಸಮಿತಿ ರಚನೆ ಕಾಲಹರಣ ಮಾಡುವ ತೀರ್ವನವಾಗುತ್ತದೆ. ಅದಕ್ಕೆ ನೌಕರರ ವಿರೋಧವಿದೆ.

| ಶಾಂತಾರಾಮ ಎನ್​ಪಿಎಸ್ ನೌಕರರ ಸಂಘದ ಅಧ್ಯಕ್ಷ

ಎನ್​ಪಿಎಸ್ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ಯೊಂದನ್ನು ರಚಿಸಲು ನಿರ್ಧರಿಸ ಲಾಗಿದೆ. ನೌಕರರ ಸಮಸ್ಯೆಗೆ ಸ್ಪಂದಿಸುತ್ತೇವೆ.

| ಕುಮಾರಸ್ವಾಮಿ ಸಿಎಂ

ಯಾವ್ಯಾವ ಬೇಡಿಕೆಗಳಿಗೆ ಸಮ್ಮತಿ?

01. ಮರಣ ಮತ್ತು ನಿವೃತ್ತಿ ಉಪಧನ (ಡಿಸಿಆರ್​ಜಿ) ಈ ಮೊದಲು 2018ರ ಏ.1 ರಿಂದ ಜಾರಿಗೆ ತರಲು ಸರ್ಕಾರ ಒಪ್ಪಿತ್ತು. ಆದರೆ ನೌಕರರು ಸೇವೆಗೆ ಸೇರಿದ (2006 ಏ.1 ರಿಂದಲೇ)ದಿನದಿಂದಲೇ ಜಾರಿಗೆ ತರಬೇಕು ಎಂಬ ಬೇಡಿಕೆಯಿಟ್ಟಿದ್ದರು. ಅದಕ್ಕೀಗ ಹಣಕಾಸು ಇಲಾಖೆ ಒಪ್ಪಿದೆ. ಇದರಿಂದಾಗಿ 30 ವರ್ಷ ಕಾರ್ಯನಿರ್ವಹಿಸುವ ಸಿ ದರ್ಜೆ ನೌಕರನಿಗೆ ಕನಿಷ್ಠ 15 ಲಕ್ಷ ರೂ. ನಿವೃತ್ತಿ ನಂತರ ಸಿಗಲಿದೆ.

02. ಮರಣ ಹೊಂದಿದ ನೌಕರರ ಕುಟುಂಬ ಪಿಂಚಣಿಯನ್ನು 2018 ಏ.1 ರಿಂದ ನೀಡಲು ಸರ್ಕಾರ ಹಿಂದೆ ಒಪ್ಪಿಗೆ ನೀಡಿತ್ತು. ಆದರೆ 2006 ಏಪ್ರಿಲ್​ನಿಂದಲೇ ಜಾರಿಗೆ ಕೊಡಬೇಕು ಎಂಬುದು ನೌಕರರ ಒತ್ತಡವಾಗಿತ್ತು. ಎನ್​ಪಿಎಸ್​ನಡಿ ನೇಮಕವಾಗಿರುವ ನೌಕರರ ಪೈಕಿ 98 ಜನ ಮೃತರಾಗಿದ್ದಾರೆ. ಆ ಕುಟುಂಬಗಳು ಸೇರಿದಂತೆ ಕುಟುಂಬ ಪಿಂಚಣಿಯನ್ನು 2006 ಏ.1 ರಿಂದಲೇ ಅನ್ವಯ ಮಾಡಲು ಸಮ್ಮತಿಸಲಾಗಿದೆ.

03. ಎನ್​ಪಿಎಸ್ ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ಇರಲಿಲ್ಲ. ಈ ನೌಕರರಿಗೂ ಜಿಪಿಎಫ್ ನೀಡುವ ಸಲುವಾಗಿ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಒಪ್ಪಿದೆ.

04. ಕರ್ನಾಟಕ ವಿಮಾ ಯೋಜನೆ (ಕೆಜಿಐಡಿ) ಪ್ರೀಮಿಯಂ ಮೆಚ್ಯುರಿಟಿಗೆ ವಯೋಮಿತಿ 55 ವರ್ಷವಿತ್ತು. ಆದರೆ ನಿವೃತ್ತಿ ವಯಸ್ಸನ್ನು ಸರ್ಕಾರ 2012ರಲ್ಲಿ 60 ವರ್ಷಕ್ಕೆ ಏರಿಸಿದೆ. ಆದ್ದರಿಂದ ಪ್ರೀಮಿಯಂ ಮೆಚ್ಯುರಿಟಿಯ ವಯೋಮಿತಿಯನ್ನು 60 ವರ್ಷಕ್ಕೆ ಏರಿಸಲು ಹಣಕಾಸು ಇಲಾಖೆ ಸಮ್ಮತಿಸಿದೆ.

ಸಮಿತಿ ಬಗ್ಗೆ ಗೊಂದಲ

ಎನ್​ಪಿಎಸ್ ರದ್ದತಿ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಿತಿಯೊಂದನ್ನು ರಚಿಸುವುದು ಸರ್ಕಾರದ ಉದ್ದೇಶ. ಪರ- ವಿರೋಧ ಅಭಿಪ್ರಾಯದ ನಡುವೆಯೇ ಮುಖ್ಯಮಂತ್ರಿ ಇದಕ್ಕೆ ಸಮ್ಮತಿಸಿದ್ದಾರೆ. ಆದರೆ ಈ ವಿಚಾರದಲ್ಲಿ ನೌಕರರಲ್ಲೇ ಗೊಂದಲವಿದೆ. ರಾಜ್ಯ ನೌಕರರ ಸಂಘದ ಕೆಲ ಪದಾಧಿಕಾರಿಗಳು ಸಮಿತಿ ರಚನೆಯ ಪರವಾಗಿದ್ದರೆ ಎನ್​ಪಿಎಸ್ ರದ್ದತಿಗಾಗಿ ಹೋರಾಟ ನಡೆಸಿರುವ ಎನ್​ಪಿಎಸ್ ನೌಕರರ ಸಂಘ ವಿರೋಧಿಸುತ್ತಿದೆ. ಹಣಕಾಸು ಇಲಾಖೆಯ ಅಧಿಕಾರಿಗಳ ನೇತೃತ್ವವಿರುವ ಸಮಿತಿಗೆ ಎನ್​ಪಿಎಸ್ ರದ್ದತಿಗೆ ಶಿಫಾರಸು ಮಾಡಲು ಸಾಧ್ಯವಾಗುವುದಿಲ್ಲವೆಂಬುದು ಎನ್​ಪಿಎಸ್ ನೌಕರರ ಅಭಿಪ್ರಾಯ. ಹಣಕಾಸು ಇಲಾಖೆಯ ಅಧಿಕಾರಿಗಳು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಸಮಿತಿಯ ಅಧ್ಯಕ್ಷರೇ ರಾಜೀನಾಮೆ ನೀಡಿದ್ದಾರೆ. ಕೇರಳದಲ್ಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಸಮಿತಿ ಇದೆ.

2 ಲಕ್ಷಕ್ಕೂ ಅಧಿಕ ನೌಕರರು

ಎನ್​ಪಿಎಸ್ ಆರಂಭವಾದ 2006ರ ಏ.1 ರಿಂದ ಇಲ್ಲಿಯ ತನಕ ವಿವಿಧ ಇಲಾಖೆಗಳಿಗೆ ನೇಮಕವಾಗಿರುವ 2,00,898 ನೌಕರರಿದ್ದಾರೆ. ಅಲ್ಲದೆ ಅರೆಸರ್ಕಾರಿ, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳಿಗೆ ನೇಮಕವಾಗಿರುವ 1.50 ಲಕ್ಷ ನೌಕರರಿದ್ದಾರೆ ಎಂಬುದು ಸರ್ಕಾರದಿಂದಲೇ ಲಭ್ಯವಾಗಿರುವ ಮಾಹಿತಿ.

ಖಾಸಗಿ ಸಂಸ್ಥೆ ನಿರ್ವಹಣೆ

ಎನ್​ಪಿಎಸ್ ಅನ್ನು ಖಾಸಗಿ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದೆ. ಖಾಸಗಿ ಸ್ವಾಮ್ಯದ ಬ್ಯಾಂಕ್ ಹಣಕಾಸಿನ ಉಸ್ತುವಾರಿ ನೋಡುತ್ತಿದ್ದು, ಯಾವ ಖಾತ್ರಿಯೂ ಇಲ್ಲ, ಅದೇ ಹಣವನ್ನು ಸರ್ಕಾರ ಕೆಜಿಐಡಿಯಲ್ಲಿ ಹಾಕಿದರೆ ಗ್ಯಾರೆಂಟಿ ಇರುತ್ತದೆ ಎಂಬುದು ಎನ್​ಪಿಎಸ್ ನೌಕರರ ಅಭಿಪ್ರಾಯ.

ಕೇಜ್ರಿವಾಲ್ ದಿಟ್ಟ ಹೆಜ್ಜೆ

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ನೀಡಿದ್ದ ಭರವಸೆಯಂತೆ ದೆಹಲಿ ಸರ್ಕಾರ ವಿಧಾನಮಂಡಲದಲ್ಲಿ ಎನ್​ಪಿಎಸ್ ರದ್ದತಿಗೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪ್ರತಿಭಟನೆಗೆ ಸಿದ್ಧತೆ

ಕರ್ನಾಟಕದಲ್ಲೂ ಎನ್​ಪಿಎಸ್ ರದ್ದತಿ ನಿರ್ಣಯಕ್ಕೆ ಒತ್ತಾಯಿಸಿ ನೌಕರರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ನಮ್ಮ ಸಂಘದ ಬೇಡಿಕೆಯಂತೆ ಸಮಿತಿ ರಚನೆಗೆ ಸರ್ಕಾರ ಒಪ್ಪಿದೆ. ಇದರಿಂದ ಎನ್​ಪಿಎಸ್ ನೌಕರರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ.

-ರಮೇಶ್ ಜಿ ಸಂಗ ಅಧ್ಯಕ್ಷ, ನೂತನ ಪಿಂಚಣಿಗೆ ಒಳಪಡುವ ನೌಕರರ ಸಂಘ