ವರ್ಷಧಾರೆಯಿಂದ ಕಾಳ್ಗಿಚ್ಚು ಉಪಶಮನ

ಎಂ.ಬಸವರಾಜು ಚಾಮರಾಜನಗರ
ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯು ಕಾಳ್ಗಿಚ್ಚಿನ ಆತಂಕವನ್ನು ದೂರ ಮಾಡಿದೆ.

ಕಳೆದ ಎರಡು ತಿಂಗಳಿಂದಲೂ ತಾಪಮಾನ ಏರಿಕೆಯಿಂದಾಗಿ ಜಿಲ್ಲೆಯ 3 ವನ್ಯಧಾಮ ವ್ಯಾಪ್ತಿಯ ಅರಣ್ಯದಲ್ಲಿನ ಕೆರೆ, ಕಟ್ಟೆಗಳೆಲ್ಲ ಬರಿದಾಗುವುದರ ಜತೆಗೆ ಅರಣ್ಯ ಒಣಗಿ ಹೋಗಿತ್ತು. ಇದರಿಂದ ಇಲ್ಲಿನ ಕಾಡು ಪ್ರಾಣಿಗಳು ಮೇವು ಹಾಗೂ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಅರಣ್ಯ ಒಣಗಿದ್ದ ಪರಿಣಾಮ ಕಾಳ್ಗಿಚ್ಚು ಸಂಭವಿಸಲೂ ಕಾರಣವಾಗಿತ್ತು.

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಒಂದು ತಿಂಗಳ ಹಿಂದೆ ಕಾಳ್ಗಿಚ್ಚು ಸಂಭವಿಸಿ ಸುಮಾರು 20 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಬಿಆರ್‌ಟಿ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿಯೂ ಕಾಳ್ಗಿಚ್ಚು ಸಂಭವಿಸಿ ಸಾವಿರಾರು ಎಕರೆ ಅರಣ್ಯ ಬೆಂಕಿಯಲ್ಲಿ ಸುಟ್ಟು ಹೋಗಿತ್ತು.

ಕಾಳ್ಗಿಚ್ಚು ಸಂಭವಿಸಿದ ನಂತರ ಈ ಅರಣ್ಯ ಪ್ರದೇಶಗಳಲ್ಲಿ ಮೇವು ಹಾಗೂ ನೀರಿನ ಸಮಸ್ಯೆ ಹೆಚ್ಚಾಗಿ ಕಾಡಿತ್ತು. ಆದರೆ ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯು ಕಾಳ್ಗಿಚ್ಚಿನ ಆತಂಕವನ್ನು ದೂರ ಮಾಡಿದೆ.

ಕೆರೆ, ಕಟ್ಟೆಗಳಲ್ಲಿ ಸಂಗ್ರಹವಾಗುತ್ತಿರುವ ನೀರು: ಜಿಲ್ಲೆಯ 3 ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಒಣಗಿ ಹೋಗಿದ್ದ ಕೆರೆ, ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಅಲ್ಪಸ್ವಲ್ಪ ನೀರಿನಿಂದ ಕೂಡಿದ್ದ ಕೆರೆ, ಕಟ್ಟೆಗಳು ತುಂಬಲಾರಂಭಿಸಿವೆ. ಮುಂದಿನ ಕೆಲ ದಿನಗಳು ನಿರಂತರವಾಗಿ ಮಳೆ ಸುರಿದರೆ ಅರಣ್ಯ ವ್ಯಾಪ್ತಿಯ ಕೆರೆ, ಕಟ್ಟೆಗಳೆಲ್ಲ ಬಹುತೇಕ ತುಂಬಿ ವನ್ಯಪ್ರಾಣಿಗಳಿಗೆ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ.

ನಿಟ್ಟುಸಿರು ಬಿಟ್ಟ ಅರಣ್ಯ ಸಿಬ್ಬಂದಿ: ಅರಣ್ಯ ಇಲಾಖೆಯ ಸಿಬ್ಬಂದಿ ದಿಢೀರನೆ ಬಂದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಅರಣ್ಯದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಇಲ್ಲಿನ ಅರಣ್ಯ ಸಿಬ್ಬಂದಿ ನಿರತರಾಗಿದ್ದರು. ಬೆಂಕಿ ಬೀಳದಂತೆಯೂ ಅರಣ್ಯವನ್ನು ಕಾಯುವ ಕೆಲಸ ಮಾಡಿದ್ದರು.

ಬೆಂಕಿ ಬಿದ್ದ ಅರಣ್ಯ ಪ್ರದೇಶದಲ್ಲಿ ಹಸಿರು ಇಲ್ಲದಂತಾಗಿತ್ತು. ಇದರಿಂದ ಪ್ರಾಣಿಗಳಿಗೆ ಮೇವಿನ ಸಮಸ್ಯೆ ಉಂಟಾಗಿತ್ತು. 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಣಗಿ ಹೋಗಿದ್ದ ಅರಣ್ಯದಲ್ಲಿ ಮುಂದಿನ ಕೆಲ ದಿನಗಳಲ್ಲಿಯೇ ಹುಲ್ಲು ಜಾತಿಯ ಹೊಸ ಗಿಡಗಳು ಚಿಗುರೊಡೆಯುತ್ತವೆ. ಇದರಿಂದ ಇಷ್ಟು ದಿನ ಕಾಡು ಪ್ರಾಣಿಗಳಿಗೆ ತಲೆದೋರಿದ್ದ ಮೇವಿನ ಸಮಸ್ಯೆ ಇಲ್ಲದಂತಾಗುತ್ತದೆ.

ಇನ್ನೂ 2 ದಿನ ಮಳೆ ನಿರೀಕ್ಷೆ: ಏ.22ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 2-3 ದಿನಗಳು ನಿರಂತರವಾಗಿ ಮಳೆ ಸುರಿದರೆ ಜಿಲ್ಲೆಯ 3 ಅರಣ್ಯ ಪ್ರದೇಶದ ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹವಾಗಲಿದೆ.

ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯು ಮುಂದಿನ 2-3 ದಿನಗಳ ಕಾಲ ನಿರಂತರವಾಗಿ ಸುರಿದರೆ ಅರಣ್ಯ ವ್ಯಾಪ್ತಿಯಲ್ಲಿ ನೀರಿಲ್ಲದೆ ಬತ್ತಿ ಹೋಗಿರುವ ಕೆರೆ, ಕಟ್ಟೆಗಳು ತುಂಬುತ್ತವೆ. ಈ ಮಳೆಯು ಕಾಡಿನಲ್ಲಿ ಸಂಭವಿಸುತ್ತಿದ್ದ ಕಾಳ್ಗಿಚ್ಚಿನ ಆತಂಕವನ್ನು ದೂರ ಮಾಡಿದೆ. ಪ್ರಾಣಿಗಳಿಗೆ ಉಂಟಾಗಿದ್ದ ಮೇವಿನ ಸಮಸ್ಯೆ ಮುಂದಿನ ದಿನಗಳಲ್ಲಿ ದೂರವಾಗಲಿದೆ.
ಡಾ.ಶಂಕರ್ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ