ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ತ್ಯಾಜ್ಯ ರಾಶಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಸ್ವಚ್ಛತೆಗೆ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದರೂ ಕೆಲವರು ರಸ್ತೆ ಬದಿ ಕಸ, ತ್ಯಾಜ್ಯ ತಂದು ಸುರಿಯುವುದನ್ನು ಮುಂದುವರಿಸಿದ್ದಾರೆ. ಮಳೆಗಾಲದಲ್ಲಿ ಕಸ ಸಮಸ್ಯೆಯಿಂದ ರೋಗಭೀತಿ ಆವರಿಸುತ್ತಿದ್ದು, ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸ ಎಸೆದು ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರ ಶಾರದಾ ಹೋಟೆಲ್ ಸನಿಹದ ಹೆದ್ದಾರಿ ಎರಡು ಪಾರ್ಶ್ವಗಳ ಉದ್ದಕ್ಕೂ ಕಸ ತುಂಬಿ ತುಳುಕುತ್ತಿದ್ದು, ನೂರಾರು ಸೀಯಾಳ ತ್ಯಾಜ್ಯವನ್ನು ಎಸೆದಿರುವುದರಿಂದ ಮಳೆ ನೀರು ಅದರೊಳಗೆ ತುಂಬಿಕೊಂಡಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗುವುದು ಹೆಚ್ಚುತ್ತಿದೆ. ರೋಗವಾಹಕ ಸೊಳ್ಳೆಗಳಿಂದ ಡೆಂೆ, ಮಲೇರಿಯಾ, ಚಿಕೂನ್‌ಗುನ್ಯ ಮಾರಕ ಜ್ವರಭಾದೆಗಳು ಪರಿಸರದಲ್ಲಿ ಹರಡಲು ಕಾರಣವಾಗುತ್ತಿದೆ.

ಸರ್ಕಾರ ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ಬೊಂಡದ ಸಿಪ್ಪೆ, ಟಯರ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಮುದ್ರಣ, ದೃಶ್ಯ, ಶ್ರವಣ ಮಾಧ್ಯಮಗಳ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಆದರೂ ನಗರಸಭೆ ವ್ಯಾಪ್ತಿಯಲ್ಲಿ ಕಸ ಎಸೆದು ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ಸಂಪರ್ಕಿಸುವ ರಸ್ತೆ ಬದಿಯಲ್ಲಿ ತಾಜ್ಯಗಳನ್ನು ರಾಶಿ ಹಾಕಲಾಗಿದ್ದು, ಇದನ್ನು ಬೀದಿ ನಾಯಿಗಳು ಚೆಲ್ಲಾಪಿಲ್ಲಿ ಮಾಡಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿದೆ.

ಗ್ರಾಪಂಗಳಿಗೆ ಜಾಗದ ಸಮಸ್ಯೆ: ನಗರಸಭಾ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ಮನೆ ಮನೆಗೆ ಭೇಟಿ ನೀಡಿ ಕಸವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ನಗರಸಭೆಗೆ ಹೊಂದಿಕೊಂಡಿರುವ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಸ ವಿಲೇವಾರಿಗೆ ಯಾರೂ ಬರುತ್ತಿಲ್ಲ. ವರ್ಷದ ಹಿಂದೆ ಈ ಭಾಗದಲ್ಲಿ ಕಸ ಪಡೆಯುವುದನ್ನು ನಗರಸಭೆ ಸ್ಥಗಿತಗೊಳಿಸಿದೆ. ಹೀಗಾಗಿ ಅತ್ತ ನಗರಸಭೆಯೂ ಇಲ್ಲ. ಇತ್ತ ಗ್ರಾಪಂ ಇಲ್ಲದೆ ಸ್ಥಳೀಯರು ಅತಂತ್ರರಾಗಿದ್ದಾರೆ. ನಗರಸಭೆ ವ್ಯಾಪ್ತಿಗೆ ಹೊಂದಿಕೊಂಡಿರುವ ಕಡೆಕಾರ್, ಅಂಬಲಪಾಡಿ ಗ್ರಾಪಂ ಆಡಳಿತ ಎಸ್‌ಎಲ್‌ಆರ್‌ಎಂ ಯೋಜನೆ ಜಾರಿಗೆ ಜಾಗದ ಸಮಸ್ಯೆ ಎಂದು ಹೇಳಿ ಕೈ ತೊಳೆದುಕೊಂಡಿದ್ದು, ಜನರು ಕಸವನ್ನು ಎಲ್ಲಿ ವಿಲೇವಾರಿ ಮಾಡುವುದು ಎಂದು ತೋಚದೆ ಕಂಗಾಲಾಗಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಪ್ರೀಯ ಹೆದ್ದಾರಿ ಉದ್ದಕ್ಕೂ ಕಸ ತ್ಯಾಜ್ಯಗಳು ರಾಶಿ ಬಿದ್ದುಕೊಂಡಿವೆ. ಅಂಗಡಿ ವ್ಯಾಪಾರಸ್ಥರ ತ್ಯಾಜ್ಯಗಳು, ಹೋಟೆಲ್ ತ್ಯಾಜ್ಯಗಳು, ಮಾಂಸದಂಗಡಿಗಳ ತ್ಯಾಜ್ಯಗಳು ಎಲ್ಲವೂ ಬಿದ್ದುಕೊಂಡು ಗಬ್ಬು ವಾಸನೆ ಹೊಡೆಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಈ ಹೆದ್ದಾರಿಯಲ್ಲಿಯೇ ನಿತ್ಯ ಸಂಚರಿಸುತ್ತಾರೆ. ಇಲ್ಲಿಯ ಸಮಸ್ಯೆ ಕಂಡರೂ ಕಣ್ಣಿದ್ದು ಕುರುಡರಾಗಿದ್ದಾರೆ.
– ನಿತ್ಯಾನಂದ ಒಳಕಾಡು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ನಾಗರಿಕ ಸಮಿತಿ

ಚುನಾವಣೆ ನಡೆದು ವರ್ಷ ಕಳೆದರೂ ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಬಂದಿಲ್ಲ. ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ದೊರೆಯದ ಪರಿಸ್ಥಿತಿ ಎದುರಾಗಿದೆ. ಪರಿಸರದ ರಕ್ಷಣೆ, ಸ್ವಚ್ಛತೆ ಕಾಳಜಿ ಇಲ್ಲದೆ ರಸ್ತೆಗಳು ಕಸ ವಿಲೇವಾರಿ ಸ್ಥಳಗಳಾಗಿ ಮಾರ್ಪಟ್ಟಿವೆ. ಇಂಥ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಇದಲ್ಲದೇ ಕಸ ವಿಲೇವಾರಿಗೂ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಒದಗಿಸಬೇಕು.
– ತಾರಾನಾಥ್ ಮೇಸ್ತ ಶಿರೂರು, ಸಾಮಾಜಿಕ ಕಾರ್ಯಕರ್ತ

Leave a Reply

Your email address will not be published. Required fields are marked *