ಐಎಸ್​ಐ ಗುರುತಿನ ಧ್ವಜ ಮಾರಾಟ ಮಾಡಿ

ಜಮಖಂಡಿ: ಪ್ಲಾಸ್ಟಿಕ್ ಧ್ವಜಗಳ ಮಾರಾಟ ನಿಷೇಧಿಸಿದ್ದು ವ್ಯಾಪಾರಸ್ಥರು ಐಎಸ್​ಐ ಚಿಹ್ನೆಯುಳ್ಳ ರಾಷ್ಟ್ರಧ್ವಜಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರೂ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡಬಾರದು ಎಂದು ಎಸಿ ರವೀಂದ್ರ ಕರಲಿಂಗನ್ನವರ ಹೇಳಿದರು.

ನಗರದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮಾಡದಂತೆ ತಂಡಗಳನ್ನು ರಚಿಸಿ ಮುನ್ನೆಚ್ಚರಿಕೆ ನೀಡಲಾಗುವುದು. ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಆ.15 ರಂದು ಬೆಳಗ್ಗೆ 6.30ಕ್ಕೆ ಚಟ್ಟುಸಿಂಗ್ ಉದ್ಯಾನವನದಲ್ಲಿ, 9 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಧ್ವಜಾರೋಹಣಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಧ್ವಜಾರೋಹಣ ನೆರವೇರಿಸುವರು. ಪಿಎಸ್​ಐ ಪರಶುರಾಮ ಮನಗೂಳಿ ಪಥಸಂಚಲನದ ನೇತೃತ್ವ ವಹಿಸುವರು. ಆಯಾ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸ್ವಾತಂತ್ರ್ಯ ಯೋಧರನ್ನು, ಹೋರಾಟಗಾರರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ಸರ್ಕಾರಿ, ಅರೆ ಸರ್ಕಾರಿ ಕಚೇರಿ ಹಾಗೂ ಎಲ್ಲ ಶಾಲೆ ಕಾಲೇಜುಗಳಲ್ಲಿ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನೆರವೇರಿಸಬೇಕು. ಧ್ವಜಾರೋಹಣಕ್ಕೂ ಮುನ್ನ ಧ್ವಜ ಪರಿಶೀಲಿಸಬೇಕು ಎಂದರು.

ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶನ ಮಾಡುವ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿ ಎಂದು ಬಿಇಒ ಅವರಿಗೆ ಸೂಚಿಸಿದರು.

ಹೆಸರು ನೋಂದಾಯಿಸಿ: ಸಾಧಕರು ಆ.12ರೊಳಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ತಮ್ಮ ಭಾವಚಿತ್ರದೊಂದಿಗೆ ಸೂಕ್ತ ದಾಖಲೆ ನೀಡಿ ಹೆಸರು ನೋಂದಾಯಿಸಬೇಕು ಎಂದು ಎಸಿ ಕರಲಿಂಗನ್ನವರ ತಿಳಿಸಿದರು.

ತಾಪಂ ಅಧ್ಯಕ್ಷೆ ನಾಗವ್ವ ಕುರಣಿ, ಉಪಾಧ್ಯಕ್ಷೆ ಚಂದ್ರವ್ವ ಬೆಳಗಲಿ, ಗ್ರೇಡ್-2 ತಹಸೀಲ್ದಾರ್ ಶಿವಾನಂದ ನಾಯ್ಕಲಮಠ, ಪೌರಾಯುಕ್ತ ಗೋಪಾಲ ಕಾಸೆ ಇದ್ದರು.