ಕೃಷಿಗೆ ರಾಷ್ಟ್ರೀಯ ಆಯೋಗ?: ರಾಜ್ಯಸಭೆಯಲ್ಲಿ ಮಂಡನೆಯಾದ ನಿಲುವಳಿಗೆ ಒಮ್ಮತದ ಬೆಂಬಲ

ನವದೆಹಲಿ: ಕೃಷಿ ವಲಯದ ಸಮಸ್ಯೆ ಹಾಗೂ ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಾಷ್ಟ್ರೀಯ ಕೃಷಿ ಆಯೋಗ ರಚನೆಯ ನಿಲುವಳಿ ರಾಜ್ಯಸಭೆಯಲ್ಲಿ ಶುಕ್ರವಾರ ಅಂಗೀಕಾರವಾಗಿದೆ.

ಬಿಜೆಪಿ ಸದಸ್ಯ ವಿಜಯ್ಪಾಲ್ ಸಿಂಗ್ ತೋಮರ್ ರಾಜ್ಯಸಭೆಯಲ್ಲಿ ಶುಕ್ರವಾರ ಈ ಪ್ರಸ್ತಾಪ ಮಂಡಿಸಿದರು. ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಶೇ. 55ಕ್ಕೂ ಅಧಿಕ ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ವಲಯ ಆಧರಿಸಿ ಇನ್ನೂ ಶೇ.15 ಜನ ವಿವಿಧ ಉದ್ಯೋಗ ನಡೆಸುತ್ತಿದ್ದಾರೆ. ಹೀಗಾಗಿ ಈ ವಲಯದ ಆಗು-ಹೋಗುಗಳ ನಿರ್ಧಾರಕ್ಕೆ ಪ್ರತ್ಯೇಕ ಆಯೋಗದ ಅಗತ್ಯವಿದೆ. ಕೃಷಿಕರ ಆದಾಯ ದ್ವಿಗುಣ ಹಾಗೂ ಕೃಷಿ ವಲಯದ ಬೆಳವಣಿಗೆಗೂ ಇದು ಪೂರಕವಾಗಲಿದೆ ಎಂದು ವಾದ ಮಂಡಿಸಿದ್ದಾರೆ. ತೋಮರ್ ಹೇಳಿಕೆಗೆ ಪಕ್ಷಭೇದ ಬಿಟ್ಟು ಎಲ್ಲ ಸದಸ್ಯರು ಬೆಂಬಲ ಸೂಚಿಸಿರುವುದು ವಿಶೇಷ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಸ್ಪಷ್ಟ ನಿಲುವು ತಿಳಿಸಿಲ್ಲ. ಅಧಿವೇಶನ ಮುಗಿಯುವುದರೊಳಗೆ ಕೃಷಿ ಸಚಿವರು ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆಯೇ ಎಂದು ಕಾದುನೋಡಬೇಕಿದೆ.

‘ಭಾರತದಲ್ಲಿ ವರ್ಷದಲ್ಲಿ ಮೂರು ಬೆಳೆ ತೆಗೆಯಲು ಅವಕಾಶವಿದೆ. ಆದಾಗ್ಯೂ ರೈತರ ಆತ್ಮಹತ್ಯೆ ತಡೆಯಲು ಆಗುತ್ತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಕುರಿತ ಸಮಗ್ರ ಅಧ್ಯಯನ ಹಾಗೂ ಬದಲಾವಣೆಗೆ ಕೃಷಿ ಆಯೋಗದ ಅಗತ್ಯವಿದೆ. ಕೃಷಿಯ ನೂತನ ತಂತ್ರಜ್ಞಾನವನ್ನು ಈ ಆಯೋಗದ ಮೂಲಕ ರೈತರಿಗೆ ಮುಟ್ಟಿಸುವ ಕೆಲಸ ಮಾಡಬೇಕು’ ಎಂದು ತೋಮರ್ ಹೇಳಿದ್ದಾರೆ.

ಕಿಸಾನ್ ಸಮ್ಮಾನ್ ಏರಿಕೆಗೆ ಆಗ್ರಹ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರ ಕುಟುಂಬಕ್ಕೆ ವಾರ್ಷಿಕವಾಗಿ ನೀಡುತ್ತಿರುವ 6 ಸಾವಿರ ರೂ.ಗಳನ್ನು 10 ಸಾವಿರ ರೂ.ಗಳಿಗೆ ಏರಿಸಬೇಕು. ಕೃಷಿಯಲ್ಲಿ ಅತ್ಯುತ್ತಮ ಸಾಧನೆಗೈದ ರೈತರಿಗೂ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಆರ್​ಟಿಐ ಕಾಯ್ದೆಗೆ ತಿದ್ದುಪಡಿ

ಪ್ರತಿಪಕ್ಷಗಳ ವಿರೋಧದ ನಡುವೆಯೂ ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಗೆ ಲೋಕಸಭೆ ಅನುಮೋದನೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ನಿಗದಿತ ಸೇವಾವಧಿಯನ್ನು ಮೊಟಕುಗೊಳಿಸಿ, ಸರ್ಕಾರದ ಅವಗಾಹನೆಗೆ ತರಲು ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯಿಂದ ಆಯುಕ್ತರ ಸೇವಾವಧಿಯು ಕೇಂದ್ರ ಅಥವಾ ರಾಜ್ಯ ಸರ್ಕಾರದ ಆದೇಶದಂತೆ ಇರಲಿದೆ. ಈಗ ಪ್ರತಿ ಆಯುಕ್ತರ ಅವಧಿ 5 ವರ್ಷ ಇದೆ. ಇನ್ನು ಈ ಅವಧಿಯನ್ನು ಸರ್ಕಾರಗಳು ನಿರ್ಧರಿಸಲಿವೆ.

ಅಧ್ಯಕ್ಷರ ಕಾರ್ಯಾವಧಿ ಇಳಿಕೆ

ಮಾನವ ಹಕ್ಕುಗಳ ಆಯೋಗದ ಕಾಯ್ದೆ ತಿದ್ದುಪಡಿಯನ್ನು ಲೋಕಸಭೆ ಅನುಮೋದಿಸಿದೆ. ಇದರಿಂದ ಆಯೋಗದ ಅಧ್ಯಕ್ಷರ ಅವಧಿ 5 ವರ್ಷದಿಂದ 3 ವರ್ಷಕ್ಕೆ ಇಳಿಯಲಿದೆ. ರಾಷ್ಟ್ರೀಯ ಆಯೋಗಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ರಾಜ್ಯ ಆಯೋಗಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಅಧ್ಯಕ್ಷರಾಗಬಹುದು. ಜತೆಗೆ ಆಯೋಗಕ್ಕೆ ಸಾರ್ವಜನಿಕ ವಲಯದಿಂದಲೂ ಸದಸ್ಯರನ್ನಾಗಿ ನೇಮಕ ಮಾಡುವ ಅವಕಾಶ ದೊರೆಯಲಿದೆ.

ಅಧಿವೇಶನ ವಿಸ್ತರಣೆ?

ಬಜೆಟ್ ಅಧಿವೇಶನವನ್ನು 2-3 ದಿನ ವಿಸ್ತರಿಸುವ ಸಾಧ್ಯತೆಯಿದೆ. ಈ ಬಾರಿ ಅಧಿವೇಶನದ ಕಲಾಪದಲ್ಲಿ ಅತ್ಯುತ್ತಮ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಪ್ರಮುಖ ವಿಧೇಯಕಗಳಿಗೆ ಅನುಮೋದನೆ ಪಡೆಯುವ ಉದ್ದೇಶದಿಂದ ಅಧಿವೇಶನ ಮುಂದುವರಿಸುವ ಸಾಧ್ಯತೆಯಿದೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಈ ಮುನ್ಸೂಚನೆ ನೀಡಿದ್ದರು. ಈಗ ಸರ್ಕಾರ ಕೂಡ ಇದನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಅನಧಿಕೃತ ಠೇವಣಿ ನಿಯಂತ್ರಣಕ್ಕೆ ವಿಧೇಯಕ

ಅನಧಿಕೃತ ಠೇವಣಿ ನಿಯಂತ್ರಿಸುವ ವಿಧೇಯಕಕ್ಕೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ಸಾಮಾನ್ಯ ಜನರಿಂದ ಅನಧಿಕೃತವಾಗಿ ಸಂಗ್ರಹಿಸುವ ಠೇವಣಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಸಾಧ್ಯವಾಗಲಿದೆ. ಚಿಟ್ ಫಂಡ್, ಆಭರಣ ಮಳಿಗೆಗಳ ಠೇವಣಿ ಯೋಜನೆಗಳು ಈ ಕಾಯ್ದೆ ವ್ಯಾಪ್ತಿಗೆ ಬರಲಿವೆ. ಪಶ್ಚಿಮ ಬಂಗಾಳದ ಶಾರದಾ ಚಿಟ್​ಫಂಡ್, ಕರ್ನಾಟಕ ಐಎಂಎ ಜ್ಯುವೆಲ್ಲರಿ ಹಗರಣಗಳು ಕೂಡ ಈ ಕಾಯ್ದೆ ವ್ಯಾಪ್ತಿಗೆ ಬರಲಿವೆ.