20ರಿಂದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್

ಬೆಂಗಳೂರು: ಫೈವ್ ಎಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಫೆಬ್ರವರಿ 20ರಿಂದ 24ರವರೆಗೆ 64ನೇ ರಾಷ್ಟ್ರೀಯ ಸೀನಿಯರ್ ಪುರುಷರ, ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಜೆ.ಪಿ. ನಗರದ ಆರ್​ಬಿಐ ಲೇಔಟ್ ಮೈದಾನದಲ್ಲಿ ಆಯೋಜಿ ಸಲಾಗಿದೆ. ಟೂರ್ನಿಯಲ್ಲಿ 35 ಪುರುಷರ ಹಾಗೂ 30 ಮಹಿಳಾ ತಂಡಗಳು ಭಾಗವಹಿಸುತ್ತಿದ್ದು, ‘ಸ್ಕಲ್ ವಿ-ಯೂರೋಕಪ್’ ಪ್ರಶಸ್ತಿಗಾಗಿ ಹೋರಾಡಲಿವೆ. ಟೂರ್ನಿಯ ಇತಿಹಾಸ ದಲ್ಲಿ ಮೊದಲ ಬಾರಿಗೆ ಕೃತಕ ಹುಲ್ಲು ಹಾಸಿನ ಅಂಕಣ ಅಳವಡಿಸಲಾಗಿದ್ದು, ಪಂದ್ಯಗಳು ಹೊನಲು ಬೆಳಕಿನಡಿಯಲ್ಲಿ ನಡೆಯ ಲಿವೆ. ಟೂರ್ನಿಗೆ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಗಳು ಮಾನ್ಯತೆ ನೀಡಿವೆ. ಪುರುಷರ ಹಾಗೂ ಮಹಿಳಾ ವಿಭಾಗದ ವಿಜೇತ ತಂಡಗಳಿಗೆ 2 ಗ್ರಾಂ ಚಿನ್ನದ ಬಾಲ್ ಬ್ಯಾಡ್ಮಿಂಟನ್ ರ್ಯಾಕೆಟ್ ಹಾಗೂ ಟ್ರೋಫಿ ನೀಡಲಾಗುತ್ತದೆ. 2ನೇ ಬಹುಮಾನ ಒಂದೂ ವರೆ ಗ್ರಾಂ ಚಿನ್ನ ಹಾಗೂ ಟ್ರೋಫಿ, 3ನೇ ಬಹುಮಾನ 8 ಗ್ರಾಂ ಬೆಳ್ಳಿ ಹಾಗೂ ಟ್ರೋಫಿ ಮತ್ತು 4ನೇ ಬಹುಮಾನ 5 ಗ್ರಾಂ ಬೆಳ್ಳಿ ಹಾಗೂ ಟ್ರೋಫಿ ನೀಡಲಾಗುತ್ತದೆ. ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ನೀಡುವ ಆಟಗಾರನಿಗೆ ಬೈಕ್, ಆಟಗಾರ್ತಿಗೆ ಸ್ಕೂಟರ್ ನೀಡಲಾಗುತ್ತದೆ.