More

    ಮೈದಾನ್​ಗೆ ಪ್ರಿಯಾಮಣಿ?: ಕೀರ್ತಿ ತೊರೆದಿದ್ದ ಪಾತ್ರದಲ್ಲಿ ಅಭಿನಯ

    ಸ್ಯಾಂಡಲ್​ವುಡ್​ನ ‘ಅಣ್ಣಾಬಾಂಡ್’ ಜತೆ ‘ಚೌಕ’ಬಾರ ಆಡಿ ‘ಇದೊಳ್ಳೆ ರಾಮಾಯಣ’ ಎಂದಿದ್ದ ‘ಚಾರುಲತಾ’ ಬೆಡಗಿ ಪ್ರಿಯಾಮಣಿ ಇದೀಗ ಬಾಲಿವುಡ್ ‘ಮೈದಾನ್’ಗೆ ಎಂಟ್ರಿ ಕೊಟ್ಟಿದ್ದಾರೆ ! 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತೆ ಪ್ರಿಯಾಮಣಿ, ಬಾಲಿವುಡ್​ನಲ್ಲಿ ಬೋನಿ ಕಪೂರ್ ನಿರ್ವಣ, ಅಜಯ್ ದೇವಗನ್ ನಟನೆಯ ‘ಮೈದಾನ್’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ.

    ಸದ್ಯ ಟಾಲಿವುಡ್, ಕಾಲಿವುಡ್​ನ ಸಾಲುಸಾಲು ಚಿತ್ರಗಳಲ್ಲಿ ಬಿಜಿ ಆಗಿರುವ ಪ್ರಿಯಾಮಣಿಗೆ ಬಾಲಿವುಡ್​ನಿಂದ ಬುಲಾವ್ ಬಂದಿದೆ ಎನ್ನಲಾಗಿದೆ. ‘ಮೈದಾನ್’ ಭಾರತದ ಫುಟ್​ಬಾಲ್ ತಂಡದ ಮಾಜಿ ಆಟಗಾರ ಸೈಯದ್ ಅಬ್ದುಲ್ ರಹೀಮ್ ಅವರ ಬಯೋಪಿಕ್ ಆಗಿದ್ದು, ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಳ್ಳಲಿದ್ದಾರೆ. ರಹೀಮ್ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ಅಭಿನಯಿಸಲಿದ್ದಾರಂತೆ.

    ಈ ಪಾತ್ರಕ್ಕೆ ಚಿತ್ರತಂಡ ದಕ್ಷಿಣ ಭಾರತೀಯ ಚಿತ್ರರಂಗದ ‘ಮಹಾನಟಿ’ ಕೀರ್ತಿ ಸುರೇಶ್ ಅವರನ್ನು ಆಯ್ಕೆ ಮಾಡಿತ್ತು. ಆದರೆ ಮಧ್ಯಮ ವಯಸ್ಸಿನ ಮಹಿಳೆಯ ಪಾತ್ರದಲ್ಲಿ ಅಭಿನಯಿಸಲು ಇಷ್ಟವಿಲ್ಲದ ಕಾರಣಕ್ಕೆ ಕೀರ್ತಿ ಈ ಸಿನಿಮಾದಿಂದ ಹೊರನಡೆದರು ಎನ್ನಲಾಗಿದೆ. ಇದೀಗ ಆ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಪ್ರಿಯಾಮಣಿ ಪಾಲಾಗಿದೆ ಎಂಬ ಮಾತುಗಳ ಕೇಳಿಬರುತ್ತಿವೆ. ಬಾಲಿವುಡ್​ನಲ್ಲಿ ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅಭಿನಯದ ‘ರಾವಣ’ ಚಿತ್ರದಲ್ಲಿ ಸಣ್ಣಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಮಣಿ, ಬಳಿಕ ‘ರಕ್ತ ಚರಿತ್ರಾ 2’ ಚಿತ್ರದಲ್ಲೂ ಅಭಿನಯಿಸಿದ್ದರು. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ‘ಚೆನ್ನೈ ಎಕ್ಸ್​ಪ್ರೆಸ್’ ಚಿತ್ರದಲ್ಲಿ ‘ಒನ್ ಟು ಥ್ರಿ ಫೋರ್’ ಹಾಡಿನಲ್ಲಿ ಕಾಣಿಸಿಕೊಂಡು ಸೊಂಟ ಬಳುಕಿಸಿದ್ದರು.

    ಇದೀಗ ‘ಮೈದಾನ್’ ಚಿತ್ರದ ಮೂಲಕ ಅಜಯ್ ದೇವಗನ್​ಗೆ ಜತೆಯಾಗಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರಿಯಾಮಣಿ ಸದ್ಯ ಜಯಲಲಿತಾ ಬಯೋಪಿಕ್​ನ ‘ತಲೈವಿ’ ಚಿತ್ರದಲ್ಲಿ ಶಶಿಕಲಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ ‘ಮೈದಾನ್’ ಚಿತ್ರಕ್ಕೆ ಅಮಿತ್ ರವಿಂದರ್​ನಾಥ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. – ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts