ಸಂಘಟನೆಯಿಂದ ಮಾತ್ರ ಸಮಾಜದ ಬೆಳವಣಿಗೆ

ಬಾಳೆಹೊನ್ನೂರು: ಸಂಘಟನೆ ಹಾಗೂ ಒಗ್ಗಟ್ಟಿನಿಂದ ಮಾತ್ರ ಬಿಲ್ಲವ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಬಿಲ್ಲವ ಸಮಾಜ ಸೇವಾ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದರು.

ನಾರಾಯಣಗುರು ಸಮುದಾಯ ಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿದ್ದ ಕೋಟಿ ಚೆನ್ನಯ್ಯ ಕ್ರೀಡಾಕೂಟ ಸಮಾರೋಪ, ನಾರಾಯಣಗುರು ಯುವ ಪ್ರಶಸ್ತಿ ಹಾಗೂ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಮುದಾಯದವರು ಸಂಘಟನೆಯಲ್ಲಿ ಭಾಗವಹಿಸುವುದು ಅಗತ್ಯ. ಸಮಾಜ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆಯಬೇಕಿದೆ. ರಾಜ್ಯ,ರಾಷ್ಟ್ರಮಟ್ಟದಲ್ಲಿ ತಮ್ಮ ಸಂಘಟನೆ ಬಲಗೊಳ್ಳಬೇಕಿದ್ದು, ಸಂಘಟನೆಯಿಂದ ಮಾತ್ರ ಅದು ಸಾಧ್ಯ ಎಂದರು.

ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಮುದಾಯದ ಸಂಘಟನೆ ಬೆಳೆಸಬೇಕು. ಸಮುದಾಯದವರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತೆ ಮಾಡಬೇಕು. ಸಮುದಾಯ ಬಾಂಧವರು ಶಿಕ್ಷಣ, ಸಮಾಜಸೇವೆ, ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ವಿವಿಧ ಕೇತ್ರದ ಸಾಧಕರಿಗೆ ಸನ್ಮಾನ : ಬಿಲ್ಲವ ಸಮಾಜದ ಕಾರ್ಯದಲ್ಲಿ ಮೈಸೂರಿನ ಉದ್ಯಮಿ ಸುಧಾಕರ್ ಮೇಲ್ಪಾಲ್ ಹಾಗೂ ಪುತ್ತೂರಿನ ಉದ್ಯಮಿ ಶರತ್​ಗೆ ನಾರಾಯಣಗುರು ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ 22 ಗಣ್ಯರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಿಲ್ಲವ ಸಮುದಾಯದ 80ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ.ನಂತೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಸರ್ಕಾರಿ ಸೇವೆಯಲ್ಲಿರುವ ಸಮಾಜದ 50ಕ್ಕೂ ಅಧಿಕ ಜನರನ್ನು ಗುರುತಿಸಿ ಗೌರವಿಸಲಾಯಿತು.