ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ

ದೇಶಾದ್ಯಂತ ಕಂಪನ ಸೃಷ್ಟಿಸಿರುವ ದಕ್ಷಿಣದ ಜಲಪ್ರಳಯ ಕೇರಳ ಹಾಗೂ ಕೊಡಗಿನಲ್ಲಿ ಕಣ್ಣೀರ ಪ್ರವಾಹವನ್ನೇ ಸೃಷ್ಟಿಸಿದೆ. ಮನೆಮಠ, ಗದ್ದೆ, ತೋಟದ ಜತೆಗೆ ನೂರಾರು ಜನ, ಜಾನುವಾರುಗಳ ಜೀವ, ಜೀವನವನ್ನೂ ಕೊಚ್ಚಿಕೊಂಡು ಹೋಗಿರುವ ಇತಿಹಾಸದ ಭೀಕರ ನೆರೆ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ಪ್ರವಾಹ ತಗ್ಗಿದರೂ ಅದರಲ್ಲಿ ಮುಳುಗಿರುವವರ ಕಣ್ಣೀರಿನ ಕಥೆ ದಿನಕ್ಕೊಂದರಂತೆ ಮೇಲೇಳುತ್ತಲೇ ಇದೆ. ಮತ್ತೊಂದೆಡೆ ಈ ಸಾವು, ನೋವಿನ ಹೊಣೆಯನ್ನು ಪ್ರಕೃತಿಗೆ ಕಟ್ಟಿ ದೂಷಿಸುವುದರ ಬಗ್ಗೆ ಪರಿಸರ ವಾದಿಗಳು, ತಜ್ಞರು ಆಕ್ಷೇಪ ತೆಗೆದಿದ್ದಾರೆ. ಭೂತಾಯಿಯ ಒಡಲು ಬಗೆದು, ಗಣಿಗಾರಿಕೆ, ಅಕ್ರಮ ಒತ್ತುವರಿ, ಕೆರೆ, ಕಟ್ಟೆಗಳನ್ನು ನುಂಗಿ ಹಾಕುತ್ತಿರುವ ಪರಿಣಾಮ ಈ ಮಾನವ ನಿರ್ವಿುತ ದುರಂತ ಎಂದು ವಿಶ್ಲೇಷಿಸಿದ್ದಾರೆ. ಈಗಲೇ ಎಚ್ಚೆತ್ತುಕೊಂಡು ಪರಿಸರ ರಕ್ಷಿಸದಿದ್ದಲ್ಲಿ ಕೇರಳ, ಕೊಡಗಿನಲ್ಲಾದ ಅನಾಹುತ ಉತ್ತರ ಕರ್ನಾಟಕ, ಪಶ್ಚಿಮಘಟ್ಟದಲ್ಲಿ ಮರುಕಳಿಸುವುದು ನಿಶ್ಚಿತ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಸಮಸ್ಯೆಗೆ ಕಾರಣ ಮತ್ತು ಪರಿಹಾರೋಪಾಯದ ವಿಸõತ ವರದಿಯನ್ನು ವಿಜಯವಾಣಿ ಓದುಗರ ಮುಂದಿಡುತ್ತಿದೆ.

ಉತ್ತರಾಖಂಡ: ಆ ಕರಾಳ ನೆನಪು….

2013ರ ಜೂನ್​ನಲ್ಲಿ ಉತ್ತರಾಖಂಡ ಎದುರಿಸಿದ ಭಾರಿ ಅತಿವೃಷ್ಟಿಯು ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ತಪ್ಪಿದರೆ ಎಂಥ ಭಯಂಕರ ಅನಾಹುತವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿತು.


ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಹಗ್ಗಜಗ್ಗಾಟ

|ಅರವಿಂದ ಅಕ್ಲಾಪುರ

ಶಿವಮೊಗ್ಗ: ಕೇರಳ, ಕೊಡಗು ದುರಂತ ಮನುಕುಲಕ್ಕೆ ಎಚ್ಚರಿಕೆ ಪಾಠ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಬೆನ್ನಲ್ಲೇ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಹಿಂದಿನ ಸರ್ಕಾರದ ನಿಲುವಿಗೆ ಅಂಟಿಕೊಂಡಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವರದಿಯ ಯಥಾವತ್ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ.

ಆ.18ರಂದು ಕೇಂದ್ರ ಪರಿಸರ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸುದೀಪ್ ದವೆ, 2017ರಲ್ಲಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿರುವಂತೆ ಕಸ್ತೂರಿ ರಂಗನ್ ವರದಿಯಲ್ಲಿನ 34 ಶಿಫಾರಸುಗಳ ಪೈಕಿ ನಾಲ್ಕು ಅಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳ ಅನುಷ್ಠಾನಕ್ಕೆ ನಮ್ಮ ಸಮ್ಮತಿಯಿದೆ ಎಂದಿದ್ದಾರೆ.

ಸಚಿವ ಸಂಪುಟ ಉಪಸಮಿತಿ ತೀರ್ಮಾನ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಮಿತಿ ಉಪಸಮಿತಿ ರಚಿಸಲಾಗಿತ್ತು.

ಸಮಿತಿಯಲ್ಲಿ ಅಂದಿನ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಟಿ.ಬಿ.ಜಯಚಂದ್ರ ಕೂಡ ಇದ್ದರು. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಇದಾದ ಬಳಿಕ ಕೇಂದ್ರ ಪರಿಸರ ಸಚಿವಾಲಯ ಹಾಗೂ ರಾಜ್ಯ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ದೆಹಲಿಯಲ್ಲಿ ನಡೆದಿತ್ತು. ಈ ವೇಳೆ ಕೇಂದ್ರದಿಂದ ಅಧಿಕಾರಿಗಳ ನಿಯೋಗ ಬಂದು ಇಲ್ಲಿನ ಜನಪ್ರತಿನಿಧಿಗಳಿಗೆ ಕಸ್ತೂರಿ ರಂಗನ್ ವರದಿಯ ತಪ್ಪು ಗ್ರಹಿಕೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದಾಗಿ ತಿಳಿಸಿತ್ತು.

ಆದರೆ ಇದುವರೆಗೂ ಕೇಂದ್ರದಿಂದ ಯಾವುದೆ ತೀರ್ಮಾನ ಪ್ರಕಟವಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಇದಕ್ಕೆ ಕೇಂದ್ರದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

ಯಾವ ಅಂಶಕ್ಕೆ ವಿರೋಧ

  • ಒಂದು ಗ್ರಾಮದ ಶೇ.20ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶ ಜೀವ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದರೆ ಅದನ್ನು ಸೂಕ್ಷ್ಮ ಪ್ರದೇಶವೆಂದು ಘೊಷಿಸಬೇಕೆಂಬ ವರದಿಯಲ್ಲಿನ ಉಲ್ಲೇಖಕ್ಕೆ ರಾಜ್ಯ ಸರ್ಕಾರದ ವಿರೋಧ. ಬದಲಾಗಿ ಸೂಕ್ಷ್ಮ ಪ್ರದೇಶವೆಂದು ಘೊಷಿಸಲು ಶೇ.50ಕ್ಕಿಂತ ಹೆಚ್ಚು ಪ್ರದೇಶ ಪರಿಸರ ಸೂಕ್ಷ್ಮವಾಗಿರಬೇಕೆಂಬ ನಿಲುವು ಸರ್ಕಾರದ್ದು.
  • ಸ್ಥಳೀಯವಾಗಿ ಮರಳು ಹಾಗೂ ಗಣಿಗಾರಿಕೆ ನಿಷೇಧಿಸುವ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರದ ಸಮ್ಮತಿಯಿಲ್ಲ.
  • 20 ಸಾವಿರ ಚ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಹಾಗೂ ನಿರ್ಮಾಣ ಯೋಜನೆಗಳನ್ನು ರದ್ದುಪಡಿಸಬೇಕೆಂಬ ವರದಿಯ ಅಂಶಕ್ಕೆ ಸರ್ಕಾರದ ವಿರೋಧ.
  • ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದ 19.05 ಲಕ್ಷ ಹೆಕ್ಟೇರ್ ಪ್ರದೇಶವನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಎಂಬ ಅಂಶ ಸೇರಿಸಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿದ್ದು, 13.09 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಎಲ್ಲೆಲ್ಲಿ ಅನ್ವಯ?

ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟದ ಆರು ರಾಜ್ಯಗಳಿಗೆ ಅನ್ವಯಿಸುತ್ತದೆ. ಕರ್ನಾಟಕದ 10 ಜಿಲ್ಲೆಗಳ 1,573 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ, ಮೂಡಿಗೆರೆ ತಾಲೂಕು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಭಟ್ಕಳ, ಹೊನ್ನಾವರ, ಜೊಯಿಡಾ, ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಿಗೆ ಅನ್ವಯವಾಗುತ್ತದೆ.

ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು, ಹಾಸನದ ಅಲೂರು ಮತ್ತು ಸಕಲೇಶಪುರ, ಮೈಸೂರಿನ ಹೆಗ್ಗಡದೇವನಕೋಟೆ, ಚಾಮರಾಜ ನಗರದ ಗುಂಡ್ಲುಪೇಟೆ, ಕೊಡಗು ಜಿಲ್ಲೆಯ 55 ಗ್ರಾಮಗಳು ಪಶ್ಚಿಮಘಟ್ಟ ವ್ಯಾಪ್ತಿಗೆ ಬರುತ್ತವೆ.

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿ ಹಿಂದಿನ ಸರ್ಕಾರದ ಅಭಿಪ್ರಾಯವನ್ನೇ ಪುಷ್ಟೀಕರಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅರಣ್ಯ ಸಂರಕ್ಷಣೆಗೆ ನಮ್ಮಲ್ಲಿರುವ ಕಾಯ್ದೆಗಳೇ ಪರಿಣಾಮಕಾರಿಯಾಗಿವೆ. ಮೇಲಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

| ಆರ್.ಶಂಕರ್ ಅರಣ್ಯ ಸಚಿವ