ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ. ನಾವು ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪುಚುಕ್ಕೆ ಇದ್ದಂತೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೋಡ್ಸೆಗೆ ಸಂಬಂಧಿಸಿದಂತೆ ನಳಿನ್ ಕುಮಾರ್ ಕಟೀಲ್, ಅನಂತಕುಮಾರ್​ ಹೆಗಡೆ ಟ್ವೀಟ್ ವಿಚಾರವಾಗಿ, ಅವರು ಏನು ಟ್ವೀಟ್ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಕಟೀಲ್, ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದು ಆ ಮಾತು ಹೇಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ಕಿಡಿಕಾರಿದರು.

ಡಿಕೆಶಿಗೆ ಧಾರವಾಡ ಪೇಡಕೊಟ್ಟು ಕಳಿಸ್ತೇವೆ

ಕುಂದಗೋಳ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಕನಕಪುರದಿಂದ ಬಂದ ಅತಿಥಿಯಾಗಿದ್ದಾರೆ. ಡಿಕೆಶಿ ಕುಂದಗೋಳಕ್ಕೆ ಬಂದು ತುಂಬಾ ದಣಿದಿದ್ದಾರೆ. ಅವರಿಗೆ ಧಾರವಾಡದ ಪೇಡಾ ಕೊಟ್ಟು ಕಳುಹಿಸುತ್ತೇವೆ ಎಂದರು.

ಸಿದ್ದರಾಮಯ್ಯಗೆ ಜೀವ ಇರುವವರೆಗೂ ದ್ವೇಷ

ಮಾಜಿ ಸಿಎಂ ಸಿದ್ದರಾಮಯ್ಯಗೆ ನಾಚಿಕೆ, ಮಾನ‌-ಮರ್ಯಾದೆ ಇಲ್ಲ. ಸಂಸ್ಕೃತಿ‌ ಇಲ್ಲದ ಮನುಷ್ಯ. ಅಭಿವೃದ್ಧಿಯಲ್ಲಿಯೂ ದ್ವೇಷದ ರಾಜಕಾರಣ ಮಾಡುತ್ತಾರೆ. ಹುಬ್ಬಳ್ಳಿ-ಧಾರವಾಡ ಕುಡಿಯೋ ನೀರಿನ ಸಮಸ್ಯೆಗೆ ಸಿದ್ದರಾಮಯ್ಯ ಅವರೇ ‌ಕಾರಣ. ಹಾವಿಗೆ 12 ವರ್ಷ ದ್ವೇಷ ಅಂತಾರೆ. ಆದರೆ ಸಿದ್ದರಾಮಯ್ಯಗೆ ಜೀವ ಇರುವವರೆಗೂ ದ್ವೇಷ ಇರಲಿದೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)