ಅನ್ಸಾರ್ ಇನೋಳಿ, ಉಳ್ಳಾಲ
ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ, ಆದರೆ ಇಲ್ಲೊಬ್ಬ ಬಾಲಕಿ ಎಲ್ಲ ರೀತಿಯ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದಾರೆ. ಉಳ್ಳಾಲ ಬೈಲ್ ಬಂಗೇರ ಲೇನ್ ನಿವಾಸಿ ನಟರಾಜ್ ವಿ.ಮತ್ತು ಆಶಾ ನಟರಾಜ್ ಪುತ್ರಿ ನತಾಶ ಎನ್.ಪ್ರತಿಭಾವಂತ ಬಾಲಕಿ.
ಕೊಲ್ಯ ಸಂತ ಜೋಸೆಫ್ ಜೋಯ್ ಲ್ಯಾಂಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಮನೆಯಲ್ಲಿ ಜೋಡಿಸಿಡಲಾಗಿರುವ ಪ್ರಶಸ್ತಿ, ಸನ್ಮಾನ ಫಲಕಗಳೇ ಸಾಕ್ಷಿ.
ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಪ್ರತಿಭಾ ಕಾರಂಜಿಯಲ್ಲಿ ಗಾಯನ, ಫ್ಯಾನ್ಸಿ ಡ್ರೆಸ್, ಏಕಪಾತ್ರಾಭಿನಯ, ಸ್ಟೋರಿ ಹೇಳುವುದು, ಪ್ರಬಂಧ ಸಹಿತ ಎಲ್ಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಬಹುಮಾನವೂ ಈಕೆಗೆ ಕಟ್ಟಿಟ್ಟ ಬುತ್ತಿ. ಈ ವರ್ಷ ಪ್ರಥಮ ಬಾರಿ ಶಾಲಾ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ತಾಲೂಕುಮಟ್ಟದ ಪಂದ್ಯಾಟದಲ್ಲಿ ಮಿಂಚಿ, ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಸ್ವಾತಂತ್ರೋತ್ಸವ ಫುಟ್ಬಾಲ್ ಪಂದ್ಯಾಟದಲ್ಲಿ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಿದ್ದು ಉತ್ತಮ ಡಿಫೆಂಡರ್ ಪ್ರಶಸ್ತಿ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈಕೆಯ ಪ್ರತಿಭೆಗೆ ಅರ್ಹವಾಗಿಯೇ ಹಲವು ಪ್ರಶಸ್ತಿ, ಸನ್ಮಾನ ಬಂದಿವೆ. ಬೆಂಗಳೂರಿನ ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಕ್ಕಳ ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ ಸಮ್ಮೇಳನ ಸಮಿತಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಆಟಿಗೊಂಜಿ ದಿನ ಕಾರ್ಯಕ್ರಮದ ಜಾನಪದ ನೃತ್ಯದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನವದುರ್ಗೆಯಾಗಿ ಪ್ರಸಿದ್ಧಿಗೆ ಈ ವರ್ಷ ನವರಾತ್ರಿ ಸಂದರ್ಭ ನವ ದುರ್ಗೆಯರ ವೇಷದಾರಿಣಿಯಾಗುವ ನತಾಶ ಜನರನ್ನು ಹುಬ್ಬೇರುವಂತೆ ಮಾಡಿದ್ದಾರೆ. ಈಕೆಯ ನವದುರ್ಗೆಯ ವೇಷಭೂಷಣ ದುರ್ಗೆಯೇ ಭೂಮಿಗೆ ಇಳಿದು ಬಂದಂತೆ ಕಾಣಿಸಿಕೊಂಡಿದೆ. ಇದು ಮಾಧ್ಯಮಗಳಲ್ಲಿ ಪ್ರಸಾರಗೊಂಡು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದರೆ, ಯೂಟ್ಯೂಬ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನತಾಶ ಸುದ್ದಿಯಾಗಿದ್ದಾರೆ.
ತಂದೆ ಮತ್ತು ತಾಯಿ ಉತ್ತಮ ಪ್ರೋತ್ಸಾಹ ನೀಡುತ್ತಿರುವುದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಭರತನಾಟ್ಯ ಮತ್ತು ವೆಸ್ಟನ್ ನೃತ್ಯದಲ್ಲೂ ಆಸಕ್ತಿ ಹೊಂದಿದ್ದು ತರಬೇತಿ ಪಡೆಯುತ್ತಿದ್ದೇನೆ, ಪ್ರಥಮ ಬಾರಿ ಫುಟ್ಬಾಲ್‌ನಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ.
ನತಾಶ ಎನ್., ಸಾಧಕ ಬಾಲಕಿ
ನತಾಶ ಸಣ್ಣ ಪ್ರಾಯದಿಂದಲೂ ಪ್ರತಿಭಾವಂತೆಯಾಗಿದ್ದು ಅದನ್ನು ಬೆಳಕಿಗೆ ಬರಲು ಹೆತ್ತವರ ಅವಿಶ್ರಮ ಪ್ರಯತ್ನ ಕಾರಣ. ಈಕೆಗೆ ಇನ್ನಷ್ಟು ಪ್ರೋತ್ಸಾಹ, ಮಾರ್ಗದರ್ಶನ ಸಿಕ್ಕರೆ ಸಾಧನೆಯ ಉನ್ನತಿಗೇರಿ ಉಳ್ಳಾಲ ಮಾತ್ರವಲ್ಲದೆ ದೇಶಕ್ಕೇ ಕೀರ್ತಿ ತರುವುದನ್ನು ಅಲ್ಲಗಳೆಯುವಂತಿಲ್ಲ.
ಜೀವನ್ ಕುಮಾರ್ ತೊಕ್ಕೊಟ್ಟು, ಅಧ್ಯಕ್ಷ
ಭಗತ್ ಸಿಂಗ್ ಸೇವಾ ಪ್ರತಿಷ್ಠಾನ, ತೊಕ್ಕೊಟ್ಟು
ರಾಜ್ಯಮಟ್ಟದ ಎನ್ವೋ ಟೆಕ್ – ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಯುಕ್ತ ಕಾರ್ಯಕ್ರಮ
https://www.vijayavani.net/mangalore-jan-15-19-3rd-year-street-food-fiesta-2025