ಕೊಹ್ಲಿ ವಿಶ್ವದ ಕೆಟ್ಟ ವರ್ತನೆಯ ಆಟಗಾರ: ಬಾಲಿವುಡ್​ ನಟ ನಸೀರುದ್ದೀನ್ ಷಾ ಕಿಡಿ

ನವದೆಹಲಿ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಎರಡನೇ ಟೆಸ್ಟ್​ ಪಂದ್ಯದ ವೇಳೆ ನಾಯಕ ವಿರಾಟ್​ ಕೊಹ್ಲಿ ಅವರು ಆಸಿಸ್​ ಆಟಗಾರ ಟಿಮ್​ ಪೈನೆ ವಿರುದ್ಧ ತೋರಿದ ಅಗ್ರೆಸಿವ್​ ಪ್ರವೃತ್ತಿಗೆ ಬಾಲಿವುಡ್​ ಹಿರಿಯ ನಟ ನಸೀರುದ್ದೀನ್ ಷಾ ಕಿಡಿಕಾರಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್​ ಮಾಡಿರುವ ಅವರು ಕೊಹ್ಲಿ ವಿಶ್ವದ ಉತ್ತಮ ಬ್ಯಾಟ್ಸಮನ್​ ಮಾತ್ರವಲ್ಲದೆ ಅತ್ಯಂತ ಕೆಟ್ಟ ವರ್ತನೆಯ ಆಟಗಾರ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸೊಕ್ಕು ಮತ್ತು ಕೆಟ್ಟ ನಡತೆಯಿಂದ ಕೊಹ್ಲಿಯ ಉತ್ತಮ ಬ್ಯಾಟಿಂಗ್​ ಪ್ರತಿಭೆ ಮಂಕಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೆಲ್ಲ ಹೇಳಿ ಕೊನೆಯಲ್ಲಿ ನಾನು ದೇಶ ಬಿಟ್ಟು ಹೋಗುವ ಉದ್ದೇಶವೇ ಇಲ್ಲ ಎಂದು ಷಾ ಕೊಹ್ಲಿ ಕಾಲೆಳೆದಿದ್ದಾರೆ. ಈ ಹಿಂದೆ ಕೊಹ್ಲಿ ನಮ್ಮ ದೇಶದ ಆಟಗಾರರನ್ನು ಪ್ರೀತಿಸದೇ ಇತರೆ ಆಟಗಾರರನ್ನು ಮೆಚ್ಚಿಕೊಂಡರೆ ಅಂತವರು ದೇಶ ಬಿಟ್ಟು ಹೋಗಿ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿ, ಆಕ್ರೋಶಕ್ಕೂ ಕಾರಣವಾಗಿತ್ತು.

ಕೊಹ್ಲಿ ಕುರಿತಾದ ಷಾ ಅವರ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಷಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ. ಷಾ ಮಾತ್ರವಲ್ಲದೆ ಹಿರಿಯ ಆಟಗಾರರಾದ ಸುನಿಲ್​ ಗವಾಸ್ಕರ್​ ಹಾಗೂ ಸಂಜಯ್​​ ಮಂಜೆರ್ಕರ್​ ಕೂಡ ಕೊಹ್ಲಿಯ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. (ಏಜೆನ್ಸೀಸ್​)