ಮಂಗಳ ಶೋಧಕ ‘ಆಪರ್ಚುನಿಟಿ ರೋವರ್​’ ನಿಷ್ಕ್ರಿಯ ಎಂದು ಘೋಷಿಸಿದ ನಾಸಾ

ವಾಷಿಂಗ್ಟನ್​: ಮಂಗಳ ಗ್ರಹದ ಶೋಧನೆಗಾಗಿ 15 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಆಪರ್ಚುನಿಟಿ ರೋವರ್​ ನೌಕೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಜೂನ್​ನಲ್ಲಿ ಮಂಗಳ ಗ್ರಹದ ಮೇಲೆ ಎದ್ದಿದ್ದ ಭೀಕರ ಧೂಳಿನ ಬಿರುಗಾಳಿಗೆ ಸಿಲುಕಿತ್ತು. ಆ ನಂತರ ಶೋಧ ನೌಕೆ ನಾಸಾದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಅಂದಿನಿಂದಲೂ ಮತ್ತೆ ಶೋಧ ನೌಕೆಯೊಂದಿಗೆ ಸಂಪರ್ಕ ಸಾಧಿಸಲು ನಾಸಾ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ನೌಕೆ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ ಎಂದು ನಾಸಾ ತಿಳಿಸಿದೆ.

ನಾಸಾ 2003ರ ಜುಲೈನಲ್ಲಿ ಆಪರ್ಚುನಿಟಿ ರೋವರ್​ ಅನ್ನು ಉಡಾವಣೆ ಮಾಡಿತ್ತು. 2004ರ ಜನವರಿ 24 ನೌಕೆ ಮಂಗಳ ಗ್ರಹದ ಮೇಲೆ ಸುರಕ್ಷಿತವಾಗಿ ಇಳಿದಿತ್ತು. ಈ ನೌಕೆಯನ್ನು 90 ದಿನ ಕಾರ್ಯನಿರ್ವಹಿಸುವಂತೆ ಮತ್ತು 1000 ಮೀ. ಸಂಚರಿಸುವಂತೆ ನಿರ್ಮಿಸಲಾಗಿತ್ತು. ಆದರೆ, ನೌಕೆ ಮಂಗಳ ಗ್ರಹದ ಕುರಿತು ಅತ್ಯಮೂಲ್ಯ ಮಾಹಿತಿಗಳನ್ನು ರವಾನಿಸಿದ ಹಿನ್ನೆಲೆಯಲ್ಲಿ ನೌಕೆಯ ಜೀವಿತಾವಧಿಯನ್ನು 60 ಬಾರಿ ವಿಸ್ತರಿಸಲಾಗಿತ್ತು ಮತ್ತು ರೋವರ್​ ನೌಕೆ 45 ಕಿ.ಮೀ. ಸಂಚರಿಸಿ ಮಂಗಳ ಗ್ರಹದ ವಿವಿಧ ವಾತಾವರಣದ ಸಂಪೂರ್ಣ ಚಿತ್ರಣವನ್ನು ಭೂಮಿಗೆ ಕಳುಹಿಸಿಕೊಟ್ಟಿತ್ತು.