ಸೂರ್ಯನ ಅತೀ ಸಮೀಪ ಗಗನ ನೌಕೆ ಕಳಿಸಲು ನಾಸಾ ಸಿದ್ಧತೆ

ನವದೆಹಲಿ: ನಾಸಾ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು ಸೂರ್ಯನ ವಿಪರೀತ ಬೇಗೆಗೆ ಕಾರಣ ತಿಳಿಯಲು , ಅದನ್ನು ವಿವರವಾಗಿ ಪರೀಕ್ಷಿಸಲು ಗಗನ ನೌಕೆಯನ್ನು ಕಳಿಸಲು ಮುಂದಾಗಿದೆ. ಈ ನೌಕೆ ಸೂರ್ಯನ ಅತೀ ಸಮೀಪಕ್ಕೆ ಹೋಗಲಿದ್ದು ಉಳಿದೆಲ್ಲ ಬಾಹ್ಯಾಕಾಶ ಸಂಸ್ಥೆಗಳನ್ನೂ, ನೌಕೆಗಳನ್ನೂ ಮೀರಿಸುವ ಸಾಧನೆ ಇದಾಗಲಿದೆ.

ಸೋಲಾರ್​ ಕರೋನಾ ಮೂಲಕ ನಿರಂತರವಾಗಿ ಜ್ವಾಲೆ ಹೊರಸೂಸುತ್ತದೆ. ಸೂರ್ಯನ ಈ ಹೊರವಲಯದ ಸೂಕ್ಷ್ಮ ಅಧ್ಯಯನದಿಂದ ಸೌರ ಮಾರುತಗಳ ಬಗ್ಗೆಯೂ ಮಾಹಿತಿ ಕಲೆ ಹಾಕಬಹುದಾಗಿದ್ದು ಈ ನಿಟ್ಟಿನಲ್ಲಿ ನಾಸಾ ಗಗನನೌಕೆಯನ್ನು ಕಳಿಸಲು ಮುಂದಾಗಿದೆ.
ಸಂಶೋಧನೆಗಾಗಿ ನಾಸಾ ಪಾರ್ಕರ್​ ಸೋಲಾರ್​ ಪ್ರೋಬ್​ ಎಂಬ ಹೆಸರಿನ ಗಗನ ನೌಕೆಯನ್ನು ಸಿದ್ಧಪಡಿಸಿದ್ದು, ಸಣ್ಣ ಕಾರಿನ ಅಳತೆಯ ರೋಬಾಟ್​ ಮಾದರಿಯಲ್ಲಿದೆ. ಫ್ಲೋರಿಡಾ ಕೇಪ್​ವ್ಯಾನ್​ನಿಂದ ಲಾಂಚ್ ಮಾಡಲು ನಿರ್ಧರಿಸಿದೆ. ಆ.6ರಂದು ದಿನಾಂಕ ನಿಗದಿ ಮಾಡಿದ್ದು ಸೋಲಾರ್​ ಪ್ರೋಬ್​ ಏಳು ವರ್ಷ ಅಲ್ಲಿಯೇ ಕಾರ್ಯಾಚರಣೆ ನಡೆಸಲಿದೆ. ಸೂರ್ಯನ ಕರೋನಾ ತಲುಪಲು ಸೌರ ಮೇಲ್ಮೈಯಿಂದಲೇ ಸುಮಾರು 3.8 ಮಿಲಿಯನ್​ ಮೈಲು ಪ್ರಯಾಣಿಸಬೇಕಾಗಿದೆ.

ಈ ಹಿಂದೆ 1976ರಲ್ಲಿ ಹೆಲಿಯೊಸ್ 2 ಎಂಬ ನೌಕೆ 27 ಮಿಲಿಯನ್​ ಮೈಲುಗಳಷ್ಟು ದೂರ ಸೂರ್ಯನ ಸಮೀಪಕ್ಕೆ ಹೋಗಿತ್ತು. ಅದಾದ ಬಳಿಕ ಈಗ ಸಿದ್ಧಪಡಿಸಿರುವ ಪಾರ್ಕರ್​ ಸೋಲಾರ್​ ಪ್ರೋಬ್​ ಮತ್ತೆ ಸೂರ್ಯನ ಅತಿ ಹತ್ತಿರ ತೆರಳಲಿದೆ.