ನವದೆಹಲಿ: ಈ ವರ್ಷ ವ್ಯಾಲೆಂಟೈನ್ಸ್ ಡೇ ನಿಮಗೆ ಅಷ್ಟೊಂದು ವಿಶೇಷ ಎಂದು ಎನಿಸಿರಬಹುದು. ಮುಂದಿನ ಸುಮಾರು 23 ವರ್ಷಗಳಲ್ಲಿ ಪ್ರೇಮಿಗಳ ದಿನದಂದು ಭೂಮಿಗೆ ಆಕಾಶಕಾಯ ಒಂದು ಅಪ್ಪಳಿಸಬಹುದು ಎಂದು ನಾಸಾ ಊಹೆ ಮಾಡಿದೆ. ನಾಸಾ ಪ್ರಸ್ತುತ 2023 DW ಎಂಬ ಕ್ಷುದ್ರಗ್ರಹವನ್ನು ಗಮನಿಸುತ್ತಿದೆ ಎಂದು ಘೋಷಿಸಿತ್ತು. ಆ ಆಕಾಶಕಾಯ ಫೆಬ್ರವರಿ 14, 2046 ರಂದು ನಮ್ಮ ಭೂಮಿಗೆ ಅಪ್ಪಳಿಸುವ ಅಪಾಯ ಇದೆ ಎಂದು ಹೇಳಲಾಗುತ್ತಿದೆ.
ಕ್ಷುದ್ರಗ್ರಹ 2023 DW ಎಂದರೇನು?
ನಾಸಾದ ಡೇಟಾಬೇಸ್ ಪ್ರಕಾರ, 2023 DW ಒಂದು ಕ್ಷುದ್ರಗ್ರಹವಾಗಿದ್ದು, ಇದು ಸುಮಾರು 49.29 ಮೀಟರ್ ವ್ಯಾಸವನ್ನು ಹೊಂದಿದೆ. ಇದು ಭೂಮಿಯಿಂದ ಸುಮಾರು 0.12 ಖಗೋಳ ಘಟಕಗಳ (AU) ದೂರದಲ್ಲಿದೆ. ಖಗೋಳ ಘಟಕವು ಭೂಮಿಯ ಕೇಂದ್ರ ಮತ್ತು ಸೂರ್ಯನ ಕೇಂದ್ರದ ನಡುವಿನ ಸರಾಸರಿ ಅಂತರವಾಗಿದೆ. ಸೂರ್ಯನಿಗೆ ಸಂಬಂಧಿಸಿದಂತೆ, ಕ್ಷುದ್ರಗ್ರಹವು ಸೆಕೆಂಡಿಗೆ ಸುಮಾರು 24.64 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ.
ಕ್ಷುದ್ರಗ್ರಹ 2023 DW ಭೂಮಿಗೆ ಅಪ್ಪಳಿಸುತ್ತದೆಯೇ?
ಪ್ರಸ್ತುತ, ಈ ಸಾಧ್ಯತೆ ತೀರಾ ಕಮ್ಮಿ ಇದ್ದರೂ ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಬಹುದು. NASA ಕ್ಷುದ್ರಗ್ರಹ ವಾಚ್‌ನ Twitter ಖಾತೆಯನ್ನು ಉಲ್ಲೇಖಿಸಲು, “ಸಾಮಾನ್ಯವಾಗಿ ಹೊಸ ವಸ್ತುಗಳು ಮೊದಲು ಪತ್ತೆಯಾದಾಗ, ಅನಿಶ್ಚಿತತೆಯನ್ನು ಕಡಿಮೆ ಮಾಡಲು ಮತ್ತು ಭವಿಷ್ಯದಲ್ಲಿ ಅವುಗಳ ಕಕ್ಷೆಗಳನ್ನು ಸಮರ್ಪಕವಾಗಿ ಊಹಿಸಲು ಹಲವಾರು ವಾರಗಳ ಡೇಟಾವನ್ನು ತೆಗೆದುಕೊಳ್ಳುತ್ತದೆ.”
ಪ್ರಸ್ತುತ ಲೆಕ್ಕಾಚಾರಗಳು ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಮ್ಮಿ ಇದ್ದು ಸಾರ್ವಜನಿಕರು ಭಯಪಡಬೇಕಾಗಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್)