ಸೂರ್ಯಶಿಕಾರಿ ಚಂದ್ರಚಕೋರಿ!

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಸೂರ್ಯನ ವಾತಾವರಣ ಅಧ್ಯಯನ ಮಾಡುವ ಸಲುವಾಗಿ ಆರಂಭಿಸಿರುವ ‘ಟಚ್ ದಿ ಸನ್’ ಹೆಸರಿನ ಸೂರ್ಯ ಶಿಕಾರಿ ಯೋಜನೆಯ ಮೊದಲ ಹೆಜ್ಜೆಯಾಗಿ ಪಾರ್ಕರ್ ಸೋಲಾರ್ ಪ್ರೋಬ್ ಹೆಸರಿನ ನೌಕೆ ಭಾನುವಾರ ಮುಂಜಾನೆ ಯಶಸ್ವಿಯಾಗಿ ನಭ ಸೇರಿದೆ. ಇತ್ತ ಭಾರತದ ಖ್ಯಾತಿಯನ್ನು ಮುಗಿಲಿಗೇರಿಸಿದ್ದ ಚಂದ್ರಯಾನ -1ರ ಯಶಸ್ಸಿನ ಬಳಿಕ ಚಂದ್ರಯಾನ-2ಕ್ಕೆ ವೇದಿಕೆ ಸಜ್ಜಾಗಿದೆ.

ಎಲ್ಲಿ ಉಡಾವಣೆ: ಫ್ಲಾರಿಡಾದ ಕೇಪ್ ಕ್ಯಾನಾವೆರಲ್

ಎಷ್ಟೊತ್ತಿಗೆ: ಭಾನುವಾರ ಮುಂಜಾನೆ 3.31

ಯೋಜನೆ ಮೊತ್ತ: 10,000 ಕೋಟಿ ರೂ.

 

ಚಂದ್ರಯಾನ-2 ಆತಂಕ ನಿವಾರಣೆ

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಉಪಗ್ರಹ ಉಡಾವಣೆಗೆ 2019ರ ಜ.3ರ ಮುಹೂರ್ತ ನಿಗದಿಯಾಗಿದೆ. ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್​ನಲ್ಲಿ ಕಂಡು ಬಂದಿದ್ದ ತಾಂತ್ರಿಕ ಸಮಸ್ಯೆಗಳಿಗೆ ತೆರೆ ಬಿದ್ದಿರುವುದರಿಂದ ಮುಂದೆ ಯಾವುದೇ ಆತಂಕ ಇಲ್ಲ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

2ನೇ ಯತ್ನ ಸಕ್ಸಸ್

ಪಾರ್ಕರ್ ನೌಕೆ ಉಡಾವಣೆಗೆ ಶನಿವಾರ ಮುಂಜಾನೆ ಮುಹೂರ್ತ ನಿಗದಿಯಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ ಭಾನುವಾರ ಮುಂಜಾನೆ ಕಾರಿನ ಗಾತ್ರದ ನೌಕೆ ಹೊತ್ತ ಡೆಲ್ಟಾ 4 ಹೆವಿ ರಾಕೆಟ್ ಯಶಸ್ವಿಯಾಗಿ ಉಡಾವಣೆ ಆಯಿತು.

ಮುಂದೇನು?

  • ಸೂರ್ಯನ ಪ್ರಭಾವಲಯ ಮತ್ತು ವಾತಾವರಣ ಅಧ್ಯಯನ, ಅಕ್ಟೋಬರ್​ನಲ್ಲಿ ನೌಕೆ ಶುಕ್ರ ಗ್ರಹವನ್ನು ಹಾದು ಹೋಗಲಿದೆ
  • ನವೆಂಬರ್​ನಲ್ಲಿ ಮೊದಲ ಬಾರಿ ಸೂರ್ಯನ ಸಮೀಪಕ್ಕೆ, ಏಳು ವರ್ಷಗಳಲ್ಲಿ 24 ಬಾರಿ ಸೂರ್ಯನ ಮುಖಾಮುಖಿ

ಸೂರ್ಯನತ್ತ ನಾಸಾ

ದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹತ್ವಾಕಾಂಕ್ಷೆಯ ‘ಸೂರ್ಯಶಿಕಾರಿ’ ಭಾನುವಾರದಿಂದ ಆರಂಭವಾಗಿದೆ. ಸೂರ್ಯನ ಅತಿ ಸಮೀಪಕ್ಕೆ ತೆರಳಿ ಅಧ್ಯಯನ ನಡೆಸಲಿರುವ ಪಾರ್ಕರ್ ಸೋಲಾರ್ ಪ್ರೋಬ್ ಉಪಗ್ರಹ ಭಾನುವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದು ಶನಿವಾರವೇ ಉಡಾವಣೆ ಯಾಗಬೇಕಿತ್ತು. ಆದರೆ ರಾಕೆಟ್​ನಲ್ಲಿನ ಹೀಲಿಯಂ ಗ್ಯಾಸ್ ಸೆನ್ಸರ್​ನಲ್ಲಿ ತಾಂತ್ರಿಕ ಅಡಚಣೆ ಕಂಡುಬಂದ ಹಿನ್ನೆಲೆಯಲ್ಲಿ ಭಾನುವಾರಕ್ಕೆ ಮುಂದೂಡಲಾಗಿತ್ತು. ಸೂರ್ಯನ ಅತಿ ಸಮೀಪಕ್ಕೆ ತೆರಳಿ ಅಧ್ಯಯನ ನಡೆಸುತ್ತಿರುವ ಮೊದಲ ಉಪಗ್ರಹ ಇದಾಗಿದೆ. 7 ವರ್ಷದ ಯೋಜನೆ ಇದಾಗಿದ್ದು, ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಮೇಲ್ಮೈನ ಅತಿ ಸಮೀಪಕ್ಕೆ ನೌಕೆ ತೆರಳಲಿದೆ. ಅತಿಯಾದ ಶಾಖ ಹೊಂದಿರುವ ಸೂರ್ಯನ ವಾತಾವರಣ ಪ್ರವೇಶಿಸಲು ಸಾಧ್ಯವಾಗುವಂತೆ ನೌಕೆಯ ವಿನ್ಯಾಸ ಮಾಡಲಾಗಿದೆ.

ವಿಶೇಷ ಹೊದಿಕೆ

ನೌಕೆಗೆ ಅಲ್ಟ್ರಾ ಪವರ್ ಹೀಟ್ ಶೀಲ್ಡ್ ಅಳವಡಿಕೆ ಮಾಡಲಾಗಿದೆ. ಇದರಿಂದ ಸೂರ್ಯನ ಅಪಾರ ಶಾಖ ಹಾಗೂ ರೇಡಿಯೇಷನ್​ನಿಂದ ರಕ್ಷಣೆ ದೊರೆಯುತ್ತದೆ. ಶೀಲ್ಡ್ ಕೇವಲ 4.5 ಇಂಚು ದಪ್ಪವಾಗಿದೆ. ಎಷ್ಟೇ ಶಾಖ ಇದ್ದರೂ ನೌಕೆಯ ಒಳಭಾಗದಲ್ಲಿ 29 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಲಿದೆ. ಭೂಮಿ ಗಿಂತ 500 ಪಟ್ಟು ಹೆಚ್ಚು ರೇಡಿಯೇಷನ್ ಸೂರ್ಯನ ಹೊರಭಾಗದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ. 2500 ಡಿಗ್ರಿ ಫ್ಯಾರನ್​ಹೀಟ್ (1370 ಡಿಗ್ರಿ ಸೆಲ್ಶಿಯಸ್) ಶಾಖ ತಾಳಿಕೊಳ್ಳುವ ಶಕ್ತಿ ಈ ನೌಕೆಗೆ ಇದೆ.

ಭಾರತೀಯನ ಪಾತ್ರ

ಸೂರ್ಯನ ಕುರಿತಾದ ಅಮೆರಿಕದ ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಪಾತ್ರವೂ ಇದೆ. 1958ರಲ್ಲಿ ಯೂಜಿನ್ ಪಾರ್ಕರ್ ಸೌರ ಜ್ವಾಲೆ ಕುರಿತು ವಿವರವಾದ ವರದಿ ಸಿದ್ಧಪಡಿಸಿದ್ದರು. ಪ್ರತಿಷ್ಠಿತ ಆಸ್ಟ್ರೋಫಿಸಿಕಲ್ ಜರ್ನಲ್ ಈ ವರದಿ ಪ್ರಕಟಿಸಲು ಎರಡು ಬಾರಿ ನಿರಾಕರಿಸಿತ್ತು. ಬಳಿಕ ಈ ಜರ್ನಲ್​ಗೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಸಂಪಾದಕರಾದರು. ಪಾರ್ಕರ್ ಅವರ ಸಂಶೋಧನಾ ವರದಿಯನ್ನು ಸುಬ್ರಹ್ಮಣ್ಯನ್ ಪ್ರಕಟಿಸಿದರು. ಆಗ ಪಾರ್ಕರ್ ವಾದಕ್ಕೆ ಮನ್ನಣೆ ದೊರೆತಿತ್ತು.

  • ಡೆಲ್ಟಾ-4 ಹೆವಿ ರಾಕೆಟ್ ಮೂಲಕ ನೌಕೆಯನ್ನು ಉಡಾವಣೆ ಮಾಡಲಾಗಿದೆ.
  • ಸುಮಾರು 10 ಸಾವಿರ ಕೋಟಿ ರೂ. ಯೋಜನೆ ಇದಾಗಿದ್ದು, ನಕ್ಷತ್ರಗಳಿಗೆ ಸಂಬಂಧಿಸಿದಂತೆ ನಾಸಾ ಹಮ್ಮಿಕೊಂಡಿರುವ ಬೃಹತ್ ಯೋಜನೆ ಇದಾಗಿದೆ.
  • ಸೂರ್ಯನ ಮೇಲ್ಮೈ ವಾತಾವರಣದ ಸೌರಮಾರುತಗಳನ್ನು ಚಿತ್ರೀಕರಿಸಲು, ಇಲೆಕ್ಟ್ರಿಕ್ ಹಾಗೂ ಮ್ಯಾಗ್ನೆಟಿಕ್, ಪ್ಲಾಸ್ಮಾ, ಇನ್ನಿತರ ವಸ್ತು, ಕಣಗಳನ್ನು ಅಧ್ಯಯನ ನಡೆಸಲು ವಿಶೇಷ ಉಪಕರಣಗಳನ್ನು ನೌಕೆಯಲ್ಲಿ ಅಳವಡಿಸಲಾಗಿದೆ.
  • ಸೂರ್ಯನ ಅತ್ಯಂತ ಕಾಂತೀಯ ವಲಯವಾಗಿರುವ ಕರೋನಾದ ಒಳಭಾಗದಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತದೆ ಎಂಬ ಕುರಿತು ಅಂಕಿ-ಅಂಶಗಳನ್ನು ನೌಕೆ ಸಂಗ್ರಹಿಸಲಿದೆ, ಸಾಮಾನ್ಯ ಕಾರಿನಷ್ಟು ದೊಡ್ಡ ನೌಕೆ ಇದು. ಸೂರ್ಯನ ಮೇಲೆ ಸಂಭವಿಸಿರುವ ಸೌರ ಮಾರುತ, ಕಾಂತೀಯ ಬಿರುಗಾಳಿ ಕುರಿತು ಅಧ್ಯಯನ ನಡೆಸುವುದು ಯೋಜನೆಯ ಗುರಿಯಾಗಿದೆ. ಕರೋನಾದ ವ್ಯಾಪ್ತಿ ಹಾಗೂ ಅಲ್ಲಿನ ಅಪಾರ ಶಕ್ತಿ ಕುರಿತೂ ದತ್ತಾಂಶ ಸಂಗ್ರಹ ಮಾಡಲಾಗುತ್ತದೆ.
  • ವಿಜ್ಞಾನಿ ಯೂಜಿನ್ ಪಾರ್ಕರ್ ಗೌರವಾರ್ಥವಾಗಿ ಅವರ ಹೆಸರನ್ನು ನೌಕೆಗೆ ಇಡಲಾಗಿದೆ. ಸೌರ ಜ್ವಾಲೆ ಕುರಿತು 1958ರಲ್ಲಿ ಪಾರ್ಕರ್ ವಿವರಣೆ ನೀಡಿದ್ದರು.

ವೇಗದ ನೌಕೆ

ಸೂರ್ಯನ ಸಮೀಪಕ್ಕೆ ತೆರಳುತ್ತಿದ್ದಂತೆ ನೌಕೆಯ ವೇಗ ಹೆಚ್ಚಾಗಲಿದೆ. ಗಂಟೆಗೆ 7 ಲಕ್ಷ ಕಿ.ಮೀ. ವೇಗದಲ್ಲಿ ಇದು ಚಲಿಸಲಿದೆ. ಅತಿ ವೇಗವಾಗಿ ಚಲಿಸುವ ಮಾನವ ನಿರ್ವಿುತ ವಸ್ತು ಇದಾಗಿದೆ.